ಡಾ. ರಾಜ್ ಕುಮಾರ್ ಅವರಿಗೆ ಇದ್ದಂಥ ಕ್ರೇಜ್ ಬೇರೆ ಯಾವುದೇ ನಟನಿಗೆ ಇರುವುದಕ್ಕೆ ಸಾಧ್ಯವೇ ಎಂದು ಊಹೆ ಮಾಡಿಕೊಳ್ಳುವುದು ಸಹ ಕಷ್ಟವೇ. ಅಣ್ಣಾವ್ರು ಅಂದರೆ ಹಾಗೆ, ಅವರೇ ಒಂದು ಬ್ರ್ಯಾಂಡ್. ಅವರ ಹೆಸರು ಕೇಳಿದರೆ ಕಣ್ಣುಮುಚ್ಚಿಕೊಂಡು ಸಿನಿಮಾ ನೋಡೋಕೆ ಜನರು ಥಿಯೇಟರ್ ಗೆ ಬರ್ತಿದ್ರು. ಅಣ್ಣಾವ್ರ ಸಿನಿಮಾ ಅಂದರೆ ಚೆನ್ನಾಗಿ ಇದ್ದೇ ಇರುತ್ತದೆ ಎನ್ನುವ ನಂಬಿಕೆ ಎಲ್ಲರಲ್ಲೂ ಇತ್ತು. ಅಂಥಾ ಮಹಾನುಭಾವ ಡಾ. ರಾಜ್ ಕುಮಾರ್ ಅವರು ಒಬ್ಬ ನಟರಷ್ಟೇ ಅಲ್ಲ, ಅದ್ಭುತವಾದ ಗಾಯಕ ಸಹ ಹೌದು. ಸಂಪತ್ತಿಗೆ ಸವಾಲ್ ಸಿನಿಮಾ ನಂತರ ಅಣ್ಣಾವ್ರು ಹಲವು ಸಿನಿಮಾಗಳಲ್ಲಿ ಹಾಡಿದರು.

ತಮ್ಮ ಸಿನಿಮಾಗೆ ಮಾತ್ರವಲ್ಲದೇ ಬೇರೆ ಕಲಾವಿದರ ಸಿನಿಮಾದಲ್ಲಿ ಸಹ ಅಣ್ಣಾವ್ರು ಹಾಡಿದ್ದಾರೆ, ಹಲವು ಭಕ್ತಿಗೀತೆಗಳನ್ನು ಸಹ ಹಾಡಿದ್ದಾರೆ. ಅವರ ಹಾಡುಗಳನ್ನ ಜನರು ಇಂದಿಗೂ ಮರೆತಿಲ್ಲ. ಅಣ್ಣಾವ್ರು ಸಿನಿಮಾ ಹಾಡುಗಳು, ಭಕ್ತಿಗೀತೆಗಳು ಮಾತ್ರವಲ್ಲದೇ ಸಮಾಜಸೇವೆಯಲ್ಲಿ ಸಹ ನಿರತರಾಗಿದ್ದರು ಎನ್ನುವುದು ನಮಗೆಲ್ಲ ಗೊತ್ತೇ ಇದೆ. ಅಣ್ಣಾವ್ರು ಅಂಥ ಹಲವು ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಡಾ. ರಾಜ್ ಕುಮಾರ್ ಅವರು ನಾಟಕರಂಗದಿಂದ ಬಂದವರು. ಹಾಗಾಗಿ ಅವರಿಗೆ ಹಾಡುಗಾರಿಕೆ ಬಹಳ ಇಷ್ಟವಾದದ್ದು, ಹಾಗೂ ಅದರಲ್ಲಿ ನಿಸ್ಸಿಮರು ಹೌದು. ಅಣ್ಣಾವ್ರು ಕಂಠಸಿರಿ ಕೇಳುವುದೇ ಅದ್ಭುತ..
ಅಣ್ಣಾವ್ರು 1986ರಲ್ಲಿ ನಡೆಸಿದ್ದ ಸಂಗೀತ ಸಂಜೆಯ ವಿಚಾರ ಈಗ ವೈರಲ್ ಆಗುತ್ತಿದೆ. ಆಗಿನ ಕಾಲಕ್ಕೆ ಅವರ ಕ್ರೇಜ್ ಹೇಗಿತ್ತು ಎನ್ನುವುದು ಆ ಕಾರ್ಯಕ್ರಮದ ಟಿಕೆಟ್ ದರ ಕೇಳಿದರೆ ಅರ್ಥವಾಗುತ್ತದೆ. 1986ರ ನವೆಂಬರ್ 29ರಂದು ಈ ಕಾರ್ಯಕ್ರಮ ಕಬ್ಬನ್ ಪಾರ್ಕ್ ನಲ್ಲಿ ನಡೆದಿತ್ತು, ಮಹಾಯೋಗ ಕ್ಷೇತ್ರ ಕಟ್ಟಡದ ನಿರ್ಮಾಣ ಸಹಾಯಾರ್ಥವಾಗಿ ಈ ಕಾರ್ಯಕ್ರಮ ನಡೆದಿತ್ತು. ಕಬ್ಬನ್ ಪಾರ್ಕ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ನಾಲ್ಕು ವಿವಿಧ ಟಿಕೆಟ್ ಗಳನ್ನು ವಿಭಿನ್ನ ಬೆಲೆಗಳಲ್ಲಿ ನಿಗದಿ ಮಾಡಲಾಗಿತ್ತು. 35 ರೂಪಾಯಿ, 50 ರೂಪಾಯಿ, 75 ರೂಪಾಯಿ, 10 ರೂಪಾಯಿ ಮತ್ತು 200 ರೂಪಾಯಿ. ಹೀಗೆ ವಿವಿಧ ಬೆಲೆಯ ಟಿಕೆಟ್ ಗಳು ಲಭ್ಯವಿತ್ತು.

1986 ರಲ್ಲಿ ಟಿಕೆಟ್ ಬೆಲೆ 200 ರೂಪಾಯಿ ಇತ್ತು ಅಂದರೆ ಈಗಿನ ಕಾಲಕ್ಕೆ ಅದು ಸಾವಿರಾರು ರೂಪಾಯಿಗಳಿಗೆ ಸಮ, ಆಗಿನ ಕಾಲಕ್ಕೆ ಅಷ್ಟು ಹಣ ಕೊಟ್ಟು ಡಾ. ರಾಜ್ ಕುಮಾರ್ ಅವರ ಸಂಗೀತ ಸಂಜೆ ಕಾರ್ಯಕ್ರಮ ನೋಡೋಕೆ ಜನರು ಹೋಗ್ತಾ ಇದ್ರು, ಆ ಎಲ್ಲಾ ಟಿಕೆಟ್ ಗಳು ಸೋಲ್ಡ್ ಔಟ್ ಆಗ್ತಿದ್ವು ಅಂದ್ರೆ ಡಾ. ರಾಜ್ ಕುಮಾರ್ ಅವರಿಗೆ ಇದ್ದ ಕ್ರೇಜ್ ಎಂಥದ್ದು ಎಂದು ನಮಗೆ ಅರ್ಥವಾಗುತ್ತದೆ. ಅಂದಿಗೂ ಇಂದಿಗೂ ಎಂದೆಂದಿಗೂ ನಟನೆಯಲ್ಲಿ, ಗಾಯನದಲ್ಲಿ, ವಿನಯದಲ್ಲಿ, ಸರಳತೆಯಲ್ಲಿ, ಜನಪ್ರಿಯತೆಯಲ್ಲಿ ಯಾವುದರಲ್ಲು ಡಾ. ರಾಜ್ ಕುಮಾರ್ ಅವರನ್ನ ಮೀರಿಸಲು ಬೇರೆ ಯಾರಿಂದಲೂ ಸಾಧ್ಯವಿಲ್ಲ ಅನ್ನೋದಂತೂ ಸತ್ಯ.
ಡಾ. ರಾಜ್ ಕುಮಾರ್ ಅವರ ಸಿನಿಮಾಗಳನ್ನ ಮಿಸ್ ಮಾಡಿಕೊಳ್ಳುವವರು ಈಗಲೂ ಸಾಕಷ್ಟು ಜನರಿದ್ದಾರೆ. ಅವರಿಗಾಗಿಯೇ ಇದೀಗ 50 ವರ್ಷಗಳ ಹಿಂದೆ ತೆರೆಕಂಡಿದ್ದ ಐತಿಹಾಸಿಕ ಸಿನಿಮಾ ಮಯೂರ ಹೊಸ ರೂಪದಲ್ಲಿ ಮತ್ತೆ ಬಿಡುಗಡೆ ಆಗಿದೆ. ಬೆಂಗಳೂರಿನ ಒರಾಯನ್ ಮಾಲ್ ನಲ್ಲಿ ಮಯೂರ ಸಿನಿಮಾ ಬಿಡುಗಡೆ ಆಗಿದ್ದು, ಜನರು ಸಿನಿಮಾ ನೋಡಿ ಸಂತೋಷಪಟ್ಟಿದ್ದಾರೆ. ಮತ್ತೆ ಥಿಯೇಟರ್ ಗೆ ಹೋಗಿ ಡಾ. ರಾಜ್ ಕುಮಾರ್ ಅವರ ಸಿನಿಮಾ ನೋಡೋದಕ್ಕಿಂತ ಬೇರೆ ಖುಷಿ ಇನ್ನೇನಿದೆ ಹೇಳಿ..