ನಿನ್ನೆ ಬೆಂಗಳೂರಿನಲ್ಲಿ ಆರ್ ಸಿ ಬಿ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಲಕ್ಷಾಂತರ ಜನ ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನ ತಮ್ಮ ನೆಚ್ಚಿನ ಆಟಗಾರರನ್ನ ನೋಡಲು ಮುಗಿಬಿದ್ದಿದ್ದರು. ವಿಧಾನಸೌಧದಲ್ಲೇನೋ ಕಾರ್ಯಕ್ರಮ ಒಂದು ಹಂತಕ್ಕೆ ಯಾವುದೇ ಅವಘಡ ಇಲ್ಲದೆ ಮುಗಿದು ಹೋಯ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣ ಮಾತ್ರ ಸೂತಕದ ಮನೆಯಾಯ್ತು.
ಕ್ರೀಡಾಂಗಣಕ್ಕೆ ನಿರೀಕ್ಷೆಗೂ ಹೆಚ್ಚು ಜನ ಬಂದ ಹಿನ್ನೆಲೆ ಸಾವು ನೋವುಗಳೇ ಸಂಭವಿಸಿ ಹೋದವು. ಮೈದಾನದ ಗೇಟ್ ಓಪನ್ ಮಾಡಿದ ಸಂದರ್ಭದಲ್ಲಿ 11 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದರು. ಈ ವೇಳೆ ಮಕ್ಕಳು ಮೃತಪಟ್ಟಿದ್ದಾರೆ. ಸುಮಾರು 43 ಕ್ಕೂ ಹೆಚ್ಚು ಜನ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಎಲ್ಲಾ ಘಟನೆ ನೆನೆದು ಡಿಸಿಎಂ ಡಿಕೆ ಶಿವಕುಮಾರ್ ಇಂದು ಕಣ್ಣೀರು ಹಾಕಿದ್ದಾರೆ. ಅದರಲ್ಲೂ ಮಕ್ಕಳ ಸಾವಿಗೆ ತೀವ್ರ ನೊಂದಿರುವ ಡಿಕೆಶಿ ಗಳಗಳನೆ ಅತ್ತರು.
ಸದಾಶಿವನಗರದ ತಮ್ಮ ಮನೆಯಲ್ಲಿ ಮಾಧ್ಯಮಗಳಿಗೆ ಮಾತನಾಡುವ ವೇಳೆ ತೀವ್ರ ಭಾವುಕರಾಗಿ ಕಣ್ಣೀರು ಹಾಕಿದರು. ನನಗೆ ಹೊಟ್ಟೆ ಹುರಿಯುತ್ತಿದೆ ಆ ಮಕ್ಕಳ ತಾಯಿ ಮಾತನಾಡೋದನ್ನ ಸಹಿಸೋಕೆ ಆಗ್ತಾ ಇಲ್ಲ. ಪೋಸ್ಟ್ ಮಾರ್ಟಮ್ ಮಾಡಬೇಡಿ ಸರ್ ಅಂತ ಅವರು ಅಂಗಲಾಚುತ್ತಿದ್ದು ನೋಡಿದರೆ ಕರಳು ಹಿಂಡುತ್ತಿದೆ. ಇಂಥಹ ಘಟನೆ ಆಗಬಾರದಿತ್ತು. ದುರಾದೃಷ್ಟವಶಾತ್ ಆಗಿ ಹೋಗಿದೆ. ಅವರೆಲ್ಲರ ನೋವು ನಮ್ಮ ಮನೆಯ ನೋವೆ ಅಂತ ಭಾವುಕರಾದರು.
ಈ ಘಟನೆಯಲ್ಲಿ 11 ಮಂದಿ ಬಲಿಯಾಗಿದ್ದಾರೆ. ಇದನ್ನು ಯಾವ ಕುಟುಂಬವೂ ತಡೆದುಕೊಳ್ಳಲು ಆಗೊದಿಲ್ಲ. ಇಲ್ಲಿ ಯಾರ ಮೇಲೆ ತಪ್ಪು ಹೊರಿಸಲು ಸಾಧ್ಯವಿಲ್ಲ. ಯಾರ ತಪ್ಪು ಅಂತ ಹೇಳೋದು. ಇದೆಲ್ಲವೂ ನಮಗೊಂದು ಪಾಠ. ಪಾಠ ಕಲಿಯಲು ಇದು ಸಕಾಲ. ನಾವು ಇದನ್ನ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈಗಾಗಲೇ ತನಿಖೆಗೂ ಆದೇಶ ನೀಡಿದ್ದೇವೆ ಎಂದರು.
ಇದೇ ವೇಳೆ ವಿಪಕ್ಷಗಳ ಟೀಕೆಗೆ ಪ್ರತ್ಯುತ್ತರ ನೀಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಹೆಣದ ಮೇಲೆ ರಾಜಕೀಯ ಮಾಡುತ್ತದೆ. ಇದನ್ನೇ ಅವರು ಈ ಹಿಂದೆಯೂ ಮಾಡಿಕೊಂಡು ಬಂದಿದ್ದಾರೆ. ನನ್ನ ಬಳಿ ಅದಕ್ಕೆ ಪಟ್ಟಿ ಇದೆ.ನಾನು ಅವರ ರೀತಿಯಲ್ಲಿ ರಾಜಕೀಯ ಮಾಡುವುದಿಲ್ಲ. ಪೊಲೀಸ್ ಕಮಿಷನರ್ ಅವರು ಬಂದು ಕಾಲ್ತುಳಿತ ಆಗಿದೆ. ಕಾರ್ಯಕ್ರಮ ಬೇಗ ಮುಗಿಸಲು ಹೇಳಿದರು. ನಾನೂ ಕೂಡಲೇ ಕೆಸಿಎ ಆಡಳಿತ ಮಂಡಳಿಗೆ ಸೂಚಿಸಿದೆ. ಕ್ರೀಡಾಂಗಣಕ್ಕೆ ಹೋಗುವ ತನಕ ನನಗೂ ಕಾಲ್ತುಳಿತ ಪ್ರಕರಣ ಗೊತ್ತಿರಲಿಲ್ಲ. ಮಾಧ್ಯಮಗಳ ಮೂಲಕವೇ ನನಗೆ ಗೊತ್ತಾಯ್ತು. ಬಳಿಕ ಪೊಲೀಸ್ ಕಮಿಷನರ್ ಮಾಹಿತಿ ನೀಡಿದರು. ರಾಜಕೀಯ ಬೇರೆ ಸಂದರ್ಭದಲ್ಲಿ ಮಾತನಾಡುತ್ತೇನೆ. ಈಗ ರಾಜಕೀಯ ಮಾಡುವುದಿಲ್ಲ ಎಂದರು.
ಬಿಜೆಪಿ ಅವಧಿಯಲ್ಲಿ ಏನೆಲ್ಲಾ ಆಯ್ತು ಎಂಬ ನಾನು ಚರ್ಚೆ ಮಾಡಲ್ಲ. ವರನಟ ರಾಜ್ ಕುಮಾರ್ ತೀರಿಕೊಂಡಾಗ ಏನಾಯ್ತು ಗೊತ್ತಿದೆ. ಈ ಬಗ್ಗೆ ಈಗ ಮಾತನಾಡಲ್ಲ. ಅವರವರ ಕಾಲದಲ್ಲಿ ಏನಾಯ್ತು ಅಂತ ಸದನ ಇದೆ ಅಲ್ಲಿ ಮಾತನಾಡುತ್ತೇನೆ. ಬಿಜೆಪಿ ಹಾಗೂ ಜೆಡಿಎಸ್ ಯಾವತ್ತೂ ಹೆಣದ ಮೇಲೆ ರಾಜಕೀಯ ನಡೆಸಿದೆ. ನಾನು ಹಾಗೆ ಮಾಡುವುದಿಲ್ಲ. ಇದು ನಮ್ಮ ರಾಜ್ಯ ಮತ್ತು ನಗರದ ವರ್ಚಸ್ಸಿನ ಪ್ರಶ್ನೆ. ನಾವು ಇದಕ್ಕೆ ಹೊಣೆ ಹೊತ್ತುಕೊಳ್ಳುತ್ತೇವೆ. ಇವರೆಲ್ಲ ಇಂತ ರಾಜಕೀಯದ ಮಾಸ್ಟರ್ ಮೈಂಡ್ ಅಂತ ಟೀಕಿಸಿದರು.



