ಸದ್ಯ ಕಾಂಗ್ರೆಸ್ ನಲ್ಲಿ ಪವರ್ ಶೇರಿಂಗ್ ಗದ್ದಲ ಮುಗಿಯುವಂತೆ ಕಾಣ್ತಾ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಒಂದು ಗುಟುರಿಗೆ ಎಲ್ಲರೂ ಸೈಲೆಂಟ್ ಆಗಿದ್ದಾರೆ ಅಂತ ಅಂದುಕೊಂಡಿದ್ದರೂ ಸದ್ದಿಲ್ಲದೆ ತೆರೆ ಮರೆಯಲ್ಲಿ ಕಸರತ್ತು ನಡೀತಾ ಇದ್ಯಾ ಅನ್ನೋ ಅನುಮಾನ ಹಾಗೂ ಚರ್ಚೆ ಶುರುವಾಗಿತ್ತು. ಏನಾದ್ರೂ ಮಾಡಿ ಸಿಎಂ ಸ್ಥಾನ ಗಿಟ್ಟಿಸಿಕೊಳ್ಳಬೇಕು ಅಂತ ಡಿಕೆ ಶಿವಕುಮಾರ್ ತೆರೆ ಮರೆಯ ಪ್ರಯತ್ನ ಮಾಡುತ್ತಲೇ ಇದ್ದಾರೆ. ಈಗ ಮತ್ತೊಂದು ಹೆಜ್ಜೆ ಮುಂದು ಹೋಗಿದ್ದಾರೆ ಎನ್ನಲಾಗುತ್ತಿದೆ.
ಹೌದು, ಕಾಂಗ್ರೆಸ್ ನಲ್ಲಿ ತೆರೆ ಮರೆಯಲ್ಲಿ ಕುರ್ಚಿ ಕಾದಾಟ ನಡೀತಾನೆ ಇದೆ. ಬಹಿರಂಗ ಹೇಳಿಕೆಗಳು, ರಹಸ್ಯ ಸಭೆಗಳು ನಡೀತಾನೆ ಇದ್ವು. ಎಲ್ಲದಕ್ಕೂ ಹೈ ಕಮಾಂಡ್ ಬ್ರೇಕ್ ಹಾಕಿದೆ ಎಂದಾಗಿತ್ತಾದರೂ, ಅದ್ಯಾವುದಕ್ಕೂ ಬ್ರೇಕ್ ಬಿದ್ದಿಲ್ಲ ಅನ್ನೋದಂತೂ ಗುಸು ಗುಸು ಇದ್ದೇ ಇತ್ತು. ಇದರ ಮುಂದುವರೆದ ಭಾಗವಾಗಿ ಡಿಕೆ ಶಿವಕುಮಾರ್ ಒಬ್ಬೊಬ್ಬರೇ ಶಾಸಕರನ್ನ ಕರೆಸಿ ಮಾತನಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.

ಇನ್ನು ಶಾಸಕರುಗಳನ್ನ ಕರೆದು ಮಾತನಾಡುವುದು ಡಿಕೆಶಿವಕುಮಾರ್ ಗೆ ಅನಿವಾರ್ಯ. ಶಾಸಕರ ಬಲಾಬಲದ ಮೇಲೆಯೇ ಸಿಎಂ ಆಯ್ಕೆಗಳು ನಡೆಯುತ್ತದೆ. ಈಗ ಅದೇ ಹಾದಿಯಲ್ಲಿ ಶಾಸಕರ ವಿಶ್ವಾಸ ಗಳಿಸಲು ಡಿಕೆ ಮುಂದಾಗ್ತಾ ಇದ್ದಾರೆ ಎನ್ನಲಾಗಿದೆ. ಮುಂದೆ ಪವರ್ ಶೇರಿಂಗ್ ಅನ್ನೋ ವಿಚಾರ ಬಂದಾಗ ತಮ್ಮ ಬೆನ್ನ ಹಿಂದೆ ನಿನ್ನಲು ಶಾಸಕರ ಬಳಿ ಮನವಿ ಮಾಡ್ತಾ ಇದ್ದಾರೆ ಎನ್ನಲಾಗಿತ್ತು ಶಾಸಕರನ್ನ ಈಗಲೇ ಹಿಡಿದಿಟ್ಟುಕೊಂಡು, ಅವರ ಸಮಸ್ಯೆ ಏನು ಅನ್ನೋದನ್ನ ಕೇಳಿದರೆ ಮುಂದೆ ಅನುಕೂಲ ಆಗಲಿದೆ ಅನ್ನೋ ಚಿಂತನೆ ಡಿಕೆಯರದ್ದು ಎನ್ನಲಾಗಿತ್ತು.

ಇದೆಲ್ಲದಕ್ಕೂ ಮೀರಿ ಈಗ ಮತ್ತೊಂದು ತಂತ್ರ ಮಾಡ್ತಾ ಇದ್ದಾರೆ ಡಿಕೆ ಶಿವಕುಮಾರ್ ಎನ್ನಲಾಗಿದೆ. ಖಾಸಗಿ ಕಾರ್ಯಕ್ರಮ ಎಂದು ದುಬೈಗೆ ಹಾರಿದ್ದಾರೆ ಡಿಕೆ ಶಿವಕುಮಾರ್. ಈ ದುಬೈ ಪ್ರವಾಸದ ಹಿಂದೆಯೂ ಮಹಾ ತಂತ್ರ ಮಾಡಿದ್ದಾರೆ ಡಿಕೆಶಿ ಎನ್ನಲಾಗಿದೆ. ಆದರೆ ಈಗ ಹುಟ್ಟಿಕೊಂಡಿರುವ ಚರ್ಚೆ ಹಾಗೂ ಅನುಮಾನ ಶಾಸಕ ಸಿಪಿವೈ ಮೇಲೆ. ಡಿಕೆ ಶಿವಕುಮಾರ್ ಹೋಗುವ ಮುನ್ನವೇ ಅವರು ದುಬೈ ನಲ್ಲಿ ಇರುವುದು ಸಹಜವಾಗಿ ಅನುಮಾನಕ್ಕೆ ಕಾರಣವಾಗಿದೆ.
ಚನ್ನಪಟ್ಟಣ ಗುದ್ದಾಟದಲ್ಲಿ ಸಿಪಿವೈಗೆ ಹೆಗಲು ಕೊಟ್ಟು ಗೆಲ್ಲಿಸಿಕೊಂಡು ಬಂದಿದ್ದೇ ಡಿಕೆ ಬ್ರದರ್ಸ್. ಈಗ ಇದೇ ಅಣ್ಣತಮ್ಮಂದಿರು ಹೊಸ ತಂತ್ರ ರೂಪಿಸಿದ್ದಾರೆ ಎಂದೇಳಲಾಗುತ್ತಿದೆ. ಸಿಪಿವೈ ಹಾಗೂ ಡಿಕೆಶಿವಕುಮಾರ್ ದುಬೈ ಪ್ರವಾಸ ಕೈಗೊಂಡಿರೋದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದ್ರೂ ಆಗಬಹುದು. ಅದಕ್ಕೆ ಪೂರಕವಾದ ವೇದಿಕೆ ತಯಾರು ಮಾಡಿಕೊಳ್ಳುವುದು ಡಿಕೆಶಿಗೆ ಅನಿವಾರ್ಯವಾಗಿದೆ.
ಆ ವೇದಿಕೆ ತಯಾರಿಯ ಭಾಗವೇ ದುಬೈ ಪ್ರವಾಸ ಎಂದು ಹೇಳಲಾಗುತ್ತಿದೆ. ಈಗಾಗಲೇ ಒಂದು ಬಾರಿ ಒಂದಿಷ್ಟು ಜನ ಶಾಸಕರನ್ನ ಟಚ್ ಮಾಡಿರೋ ಡಿಕೆ ಶಿವಕುಮಾರ್, ಅದರ ಮುಂದುವರೆದ ಭಾಗವಾಗಿ ದುಬೈ ನಲ್ಲಿ ಕೂತು ಸ್ಟ್ರಾಟಜಿಯನ್ನ ಮಾಡ್ತಾ ಇದ್ದಾರೆ ಎಂದೇಳಲಾಗುತ್ತಿದೆ. ಸಿಎಂ ಆಗಲು ಯಾವೆಲ್ಲಾ ತಯಾರಿ ಬೇಕೋ ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿ ಮಾಡಿಕೊಳ್ಳಬೇಕೋ ಅದನ್ನ ಮಾಡ್ತಾ ಇದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಕುಂಭಮೇಳಕ್ಕೆ ಹೋಗಿದ್ದು, ಪುಲ್ವಾಮಾ ದಾಳಿ ಕುರಿತು ಪೋಸ್ಟ್ ಹಾಕಿದ್ದು, ನೀರು ಮಲೀನದ ಬಗ್ಗೆ ಮಾತನಾಡದೇ ಇರೋದು ಇವೆಲ್ಲವೂ ಕೂಡ ಇದು ಒಂದು ಕಡೆ ಹೈ ಕಮಾಂಡ್ ಗೆ ಬ್ಲಾಕ್ ಮೇಲೆ ಮಾಡಿದಂತೆಯೇ ಇದೆ. ಅಷ್ಟೆ ಅಲ್ಲ ಸಿಎಂ ಸ್ಥಾನ ಸಿಗದೇ ಹೋದರೆ ನಾನು ಏನು ಬೇಕಾದ್ರೂ ಮಾಡ್ತೀನಿ ಅನ್ನೋ ಸಂದೇಶ ನೀಡಿದಂತಿದೆ.

ನಿಜಕ್ಕೂ ಡಿಕೆ ಶಿವಕುಮಾರ್ ಬಿಜೆಪಿಗೆ ಹೋಗ್ತಾರಾ ಅನ್ನೋ ಪ್ರಶ್ನೆ ಸಹಜವಾಗಿ ಎದ್ದೇಳುತ್ತೆ. ಆದರೆ ರಾಜಕೀಯದಲ್ಲಿ ಎಲ್ಲವೂ ಸಾಧ್ಯ ಅನ್ನೋದು ಅನೇಕ ಬಾರಿ ಸಾಬೀತೂ ಆಗಿದೆ. ಹೀಗಾಗಿ ಸಿಎಂ ಸ್ಥಾನಕ್ಕೆ ಬೇಕಾದ ತಯಾರಿಯನ್ನ ಮಾಡ್ತಾ ಇದ್ದಾರೆ ಎನ್ನಲಾಗಿದೆ. ಇನ್ನು ದುಬೈ ನಲ್ಲಿ ಇರುವ ಸಿಪಿವೈ ಕೂಡ ಶಾಸಕರನ್ನ ಹೇಗೆ ಕರೆ ತರುವುದು ಅನ್ನೋ ಲೆಕ್ಕಾಚಾರ ಹಾಕುವ ನಿಟ್ಟಿನಲ್ಲೇ ತಂತ್ರಗಳನ್ನ ಮಾಡುತ್ತಿದ್ದಾರೆ, ಹಾಗಾಗಿಯೇ ದುಬೈ ಗೆ ಹಾರಿರೋದು ಅನ್ನೋದು ಅನೇಕರ ಮಾತು.
ಈ ನವೆಂಬರ್ ೨೦ ಕ್ಕೆ ಸಿದ್ದರಾಮಯ್ಯ ಸಿಎಂ ಆಗಿ ಎರಡೂವರೆ ವರ್ಷ ಆಗಲಿದೆ. ಒಪ್ಪಂದ ಆಗಿದ್ದೇ ನಿಜವಾದ್ರೆ ನವೆಂಬರ್ ನಲ್ಲಿ ಸಿದ್ದರಾಮಯ್ಯ ಸ್ಥಾನ ಬಿಡಬೇಕು. ಆದರೆ ಪ್ರಸ್ತುತ ಅವರ ಮಾತುಗಳನ್ನು ಕೇಳಿದರೆ ಅವರು ಕುರ್ಚಿ ಬಿಡಲ್ಲ ಅನ್ನೋದು ಸ್ಪಷ್ಟ ಆಗ್ತಾ ಇದೆ. ಇಂಥಹ ಪರಿಸ್ಥಿತಿ ಬಂದರೆ ಮುಂದೇನು ಅನ್ನೋ ನಿಟ್ಟಿನಲ್ಲಿ ಈ ಎಲ್ಲ ತಂತ್ರಗಳು ನಡೆಯುತ್ತಿವೆ. ಆಪರೇಷನ್ ಎಮ್ ಎಲ್ ಎ ಕಾರ್ಯಕ್ಕೆ ಬೇಕಾದ ವೇದಿಕೆ ಮಾಡಿಕೊಳ್ಳುವುದು ಜೊತೆಗೆ ತಮಗೆ ಸಿಎಂ ಸ್ಥಾನ ಸಿಗದೇ ಇದ್ದರೆ ಏನು ಬೇಕಾದ್ರೂ ಆಗಲಿದೆ ಎನ್ನೊದನ್ನ ಹೈ ಕಮಾಂಡ್ ಗೆ ತಲುಪಿಸುವ ಪ್ರಯತ್ನಗಳು ಆಗುತ್ತಿವೆ ಎನ್ನಲಾಗಿದೆ