ನಿರ್ಮಾಪಕ ಉಮಾಪತಿ ಗೌಡ ಮತ್ತೆ ಚರ್ಚೆಯಲ್ಲಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರದ ಹಲಗಡಿಕೊಪ್ಪದಲ್ಲಿ ನಡೆದ ಒಕ್ಕಲಿಗರ ಸಮುದಾಯ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಉಮಾಪತಿ ಗೌಡ ಅವರ ಆಡಿದ ಮಾತುಗಳು ಈಗ ಸದ್ಯ ನಟ ದರ್ಶನ್ ಅಭಿಮಾನಿಗಳಿಗೆ ಕೋಪವೂ ತರಿಸಿದೆ.
ಕಾರ್ಯಕ್ರಮದಲ್ಲಿ ಉಮಾಪತಿಗೌಡ, ನಾನು ಅನೇಕ ತಂಟೆ ತಕರಾರುಗಳನ್ನ ಎದುರಿಸಿದ್ದೀನಿ. ಸುಮಾರು ಜನ ಕೇಳ್ತಿದ್ರು, ನೀನು ದೊಡ್ಡವರನ್ನ ಎದುರು ಹಾಕ್ಕೊಂಡು ಏನಪ್ಪಾ ಮಾಡ್ತಿಯಾ ಅಂತ. ನಾನು ಎದುರು ಹಾಕ್ಕೊಳಲ್ಲ, ನನ್ನ ಅವರು ಎದುರು ಹಾಕ್ಕೊಳ್ತಾರೆ. ನಾವು ಮಾಡೋ ಕೆಲ್ಸ ಒಳ್ಳೇದಿದ್ರೆ ನಾವು ಯಾರಿಗೂ ಭಯ ಬೀಳಬೇಕಿಲ್ಲ. ಬದುಕಿನಲ್ಲಿ ಎರಡು ಜನ ಇರ್ತಾರೆ ಅಂತಾ ಒಬ್ಬರು ಮಾದರಿಯಾಗೋರು, ಇನ್ನೊಬ್ಬರು ಜೈಲಿಗೆ ಹೋಗಿ ಬಂದೋರು, ತೊಂದರೆ ಕೊಟ್ಟು ನಶಿಸಿ ಹೋಗೋರು, ಎಚ್ಚರಿಕೆ ಕೊಡೋವಂತೋರು. ನನ್ನನ್ನು ಭಯ ಬೀಳಿಸೋ ಶಕ್ತಿ ಯಾರಿಗೂ ಇಲ್ಲ. ಸರಿಯಾದ ದಾರಿಯಲ್ಲಿ ಸಂಪಾದನೆ ಮಾಡಿದೀನಿ.. ಹೀಗಾಗಿ ಯಾವುದೇ ಕಾರಣಕ್ಕೂ ನಾನು ಯಾವುದಕ್ಕೂ ಭಯ ಬೀಳಲ್ಲ ಎಂದು ಹೇಳಿದರು.

ಉಮಾಪತಿ ಅವರ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಅಷ್ಟೇ ಅಲ್ಲ, ದರ್ಶನ್ ಜೈಲಿಂದ ಹೊರಬಂದ ಬಳಿಕ ಉಮಾಪತಿಗೆ ಬೆದರಿಕೆ ಹಾಕಿದ್ದಾರಾ ಎಂಬ ಅನುಮಾನವೂ ಈಗ ಶುರುವಾಗಿದೆ. ಏಕೆಂದರೆ ದರ್ಶನ್ ಜೈಲಿಗೆ ಹೋದ ಸಂದರ್ಭದಲ್ಲಿ ಉಮಾಪತಿ ದರ್ಶನ್ ಬಗ್ಗೆ ಸಾಕಷ್ಟು ಮಾತನಾಡಿದ್ದರು. ದರ್ಶನ್ ಇಂದ ತಮಗಾದ ಅನುಭವಗಳನ್ನೂ, ಅವರ ಗೆಳೆಯರ ಬಗ್ಗೆಯೂ ಮಾತನಾಡಿದ್ದರು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ದರ್ಶನ್ ಉಮಾಪತಿಗೆ ಬೆದರಿಕೆ ಹಾಕಿರಬೇಕು. ಅದಕ್ಕಾಗಿಯೇ ಅವರು ಹೀಗೆಲ್ಲಾ ಮಾತನಾಡುತ್ತಿದ್ದಾರೆ ಎಂಬ ಗುಸುಗುಸು ಎಲ್ಲೆಡೆ ಪ್ರಾರಂಭವಾಗಿದೆ.

ಹಾಗೆ ನೋಡಿದರೆ ಉಮಾಪತಿ ಶ್ರೀನಿವಾಸ್ ಗೌಡ ಮತ್ತು ನಟ ದರ್ಶನ್ ಆತ್ಮೀಯ ಗೆಳೆಯರಾಗಿದ್ದವರು. ಒಟ್ಟಿಗೆ ಹಿಟ್ ಸಿನಿಮಾ ಕೊಟ್ಟವರು. ಆದರೆ ಒಮ್ಮೆ ಉಮಾಪತಿ ವಿರುದ್ಧ ದರ್ಶನ್ ವಂಚನೆ ಆರೋಪ ಮಾಡಿದ್ದರು. ಕೊನೆಗೆ ಈ ವಿಚಾರದಲ್ಲಿ ಉಮಾಪತಿಯದ್ದೇನೂ ತಪ್ಪಿಲ್ಲ ಎಂದಾಯ್ತು. ಇದಾದ ನಂತರ ಉಮಾಪತಿ ಮತ್ತು ದರ್ಶನ್ ನಡುವೆ ಸಂಬಂಧ ಅಷ್ಟಕಷ್ಟೇ. ಪರಸ್ಪರರ ಮೇಲೆ ಆರೋಪ ಪ್ರತ್ಯಾರೋಪಗಳನ್ನು ಮಾಡಿಕೊಂಡರು. ಇದೀಗ ಉಮಾಪತಿ ಗೌಡ ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳು ದರ್ಶನ್ ಉಮಾಪತಿಗೆ ಎಚ್ಚರಿಕೆ ನೀಡಿದರಾ ಎಂಬ ಅನುಮಾನ ಹುಟ್ಟಿಸಿವೆ.