ಕೆಲ ವರ್ಷಗಳ ಹಿಂದೆ ಸುವರ್ಣ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಕೃಷ್ಣ ರುಕ್ಮಿಣಿ ಎಂಬ ಧಾರಾವಾಹಿ ಯ ಮೂಲಕ ಜನರಿಗೆ ಪರಿಚಯವಾದ ಡಾರ್ಲಿಂಗ್ ಕೃಷ್ಣ ತನ್ನ ಅದ್ಭುತ ನಟನೆಯ ಮೂಲಕ ಜನರ ಗಮನ ಸೆಳೆದಿದ್ದಾರೆ. ಅದಾದನಂತರ ‘ಜಾನ್ ಜಾನಿ ಜನಾರ್ಧನ್ ‘ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಬಿಡುಗಡೆಯಾದ ಪ್ರೀತಿಯ ಬಗೆಗಿನ ಇವರ ಸಿನಿಮಾವಾದ “ಲವ್ ಮೋಕ್ಟ್ರೈಲ್ ” ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಸದ್ದು ಮಾಡುತ್ತದೆ. ಇದರ ನಂತರ ಸಿನಿಮಾರಂಗದಲ್ಲಿ ದೊಡ್ಡ ಗೆಲುವನ್ನು ಕಾಣುತ್ತಾರೆ ಡಾರ್ಲಿಂಗ್ ಕೃಷ್ಣ. ಲವ್ ಮೋಕ್ಟ್ರೈಲ್ 2ನ್ನು ತಂದು ಜನರಲ್ಲಿ ಪ್ರೀತಿಯ ಭಾವನೆಯನ್ನು ಮೂಡಿಸುತ್ತಾರೆ. ಇದೀಗ ಡಾರ್ಲಿಂಗ್ ಕೃಷ್ಣ ನಟನೆಯ ಮತ್ತೊಂದು ಸಿನಿಮಾ “ಕೌಸಲ್ಯಾ ಸುಪ್ರಜಾ ರಾಮ ” ಶೂಟಿಂಗ್ ಪೂರ್ಣಗೊಂಡು ಬಿಡುಗಡೆಗೆ ಸಜ್ಜಾಗಿದೆ.

ಜುಲೈ 14ರಂದು ಸಿನಿಮಾದ ಟ್ರೈಲರ್ ಅನ್ನು ನಟ ಸುದೀಪ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ. ಜೊತೆಗೆ ನಿರ್ದೇಶಕನನ್ನೂ ಹೊಗಳಿದ್ದಾರೆ.”ಒಂದು ಸಿನಿಮಾ ಚೆನ್ನಾಗಿ ಹೋಗುತ್ತದೆ, ಒಂದು ಸಿನಿಮಾ ಚೆನ್ನಾಗಿ ಹೋಗದೆ ಇರಬಹುದು ಆದರೆ ಶಶಾಂಕ್ ಕೆಟ್ಟ ಸಿನಿಮಾ ಅಂತೂ ಮಾಡಲು ಸಾಧ್ಯವೇ ಇಲ್ಲ. ಆ ವ್ಯಕ್ತಿಯ ಮೇಲೆ ನನಗೆ ಅಷ್ಟು ನಂಬಿಕೆ ಇದೆ.ಶಶಾಂಕ್ ಒಬ್ಬ ನುರಿತ ನಿರ್ದೇಶಕ, ಅವರ ಕೈಯಲ್ಲಿ ಸಿಕ್ಕಿರುವ ನಟರು ಖಂಡಿತಾ ಸೇಫ್ ಆಗುತ್ತಾರೆ. ಅವರ ನಿರ್ಮಾಪಕರು ಸೇಫ್ ಆಗುತ್ತಾರೆ. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಚೆನ್ನಾಗಿ ಪ್ರದರ್ಶನ ಮಾಡಲಿ, ಎಲ್ಲರೂ ಖುಷಿಯಾಗಿರಿ, ಎಲ್ಲರಿಗೂ ಒಳ್ಳೆಯದಾಗಲಿ” ಎಂದು ಹಾರೈಸಿದ್ದಾರೆ ಸುದೀಪ್.
ಇದು ಪುರುಷ ಅಹಂಕಾರದ ಸಿನಿಮಾವಾಗಿದೆ ಎಂದು ಟೀಸರ್ ಸಾರಿ ಹೇಳುತ್ತಿದೆ. ಗಂಡೇ ಹೆಚ್ಚು, ಅವನೇ ಮೇಲು, ಹೆಣ್ಣು ಕೀಳು ಎಂಬ ಭಾವನೆಯನ್ನು ಹೊಂದಿರುವ ವ್ಯಕ್ತಿ ಪ್ರೀತಿಯಲ್ಲಿ ಬೀಳುತ್ತಾನೆ. ಆ ನಂತರದ ಕಥೆಯನ್ನು “ಕೌಸಾಲ್ಯಾ ಸುಪ್ರಜಾ ರಾಮ ” ಸಿನಿಮಾ ಹೇಳುತ್ತದೆ. ಸಿನಿಮಾವನ್ನು ನಿರ್ದೇಶನ ಮಾಡಿದ ಶಶಾಂಕ್ ಟ್ರೈಲರ್ ಬಿಡುಗಡೆ ವೇಳೆ ಕೆಲವು ಮಾಹಿತಿಗಳನ್ನು ಬಿಟ್ಟುಕೊಟ್ಟಿದ್ದಾರೆ. ಅದೇನೆಂದರೆ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮಹಿಳೆಯನ್ನು ದ್ವೇಷ ಮಾಡಲು ಅವನ ಅಪ್ಪಣೆ ಕಾರಣ.
ತಂದೆಯ ಪ್ರೇರಣಾದಾಯಕ ಮಾತುಗಳಿಂದ ಆತ ಸ್ತ್ರೀ ದ್ವೇಷಿಯಾಗುತ್ತಾನೆ. ಹಾಗೆಯೇ ಅವನಿಗೆ ಒಂದು ಹುಡುಗಿಯ ಜೊತೆ ಪ್ರೀತಿಯೂ ಆಗುತ್ತದೆ. ಇದೇ ಸಿನಿಮಾದ ಕಥೆ ಎಂದಿದ್ದಾರೆ.
ತಮ್ಮ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ನಟ ಡಾರ್ಲಿಂಗ್ ಕೃಷ್ಣ ನಟನೆಯನ್ನು ಇಂಪ್ರೂವ್ ಮಾಡಿಕೊಂಡಿದ್ದಾರೆ. ಹೆಚ್ಚು ಮಾಸ್ ಆಗಿ ಖಡಕ್ ಡೈಲಾಗ್ ಗಳನ್ನು ಆಡಿದ್ದಾರೆ. ಇವೆಲ್ಲವೂ ಟ್ರೈಲರ್ ನಲ್ಲಿ ತಿಳಿದು ಬಂದಿದೆ. ಸಿನಿಮಾದಲ್ಲಿ ನಾಗಭೂಷಣ್ ಹಾಸ್ಯದ ಪಾತ್ರ ಮಾಡಿದ್ದಾರೆ.
ರಂಗಾಯಣ ರಘು ಅಪ್ಪನ ಪಾತ್ರ ಮಾಡಿದ್ದರೆ, ಸುಧಾ ಬೆಳುವಾಡಿ ಅಮ್ಮನ ಪಾತ್ರ ನಿರ್ವಹಿಸಿದ್ದಾರೆ. ಈ ಸಿನಿಮಾ ಮಾಸ್, ಪ್ರೀತಿ, ಪ್ರೇಮ, ದ್ವೇಷ, ಭಾವುಕತೆ ಹೀಗೆ ಹಲವು ಅಂಶಗಳನ್ನು ಒಳಗೊಂಡಿದೆ. ಸಿನಿಮಾದ ಕೊನೆಯಲ್ಲಿ ಮಿಲನ ನಾಗರಾಜ್ ಅವರ ಎಂಟ್ರಿಯೂ ಇದೆ. ಇವರ ಪಾತ್ರವೇನು ಎಂಬುದನ್ನು ಕಾದು ನೋಡಬೇಕಿದೆ. ಸಿನಿಮಾಕ್ಕೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ಟ್ರೈಲರ್ ನಲ್ಲೆ ಕೆಲ ಜ್ಹಲಕ್ ಕೇಳಬಹುದು. ಸಿನಿಮಾವನ್ನು ಶಶಾಂಕ್ ನಿರ್ದೇಶಿಸಿ, ಮಾಜಿ ಸಚಿವ ಬಿ. ಸಿ. ಪಾಟೀಲ್ ನಿರ್ಮಾಣ ಮಾಡಿದ್ದಾರೆ. ಸಿನಿಮಾ ಜುಲೈ 28ಕ್ಕೆ ತೆರೆ ಮೇಲೆ ಬರುತ್ತದೆ.