ರಾಜ್ಯಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ, ಕಳೆದ 3 ವಾರಗಳಿಂದ ಹವಾಮಾನ ಬದಲಾವಣೆ, ಮಳೆ ಮತ್ತಿತರ ಕಾರಣಗಳಿಂದ ರಾಜ್ಯಾದ್ಯಂತ ಎಲ್ಲೆಡೆ ವೈರಲ್ ಜ್ವರದ ಹಾವಳಿ ಹೆಚ್ಚುತ್ತಿದೆ. ಆರೋಗ್ಯ ಇಲಾಖೆಯು ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಎಲ್ಲ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದೆ.
ಕೆಮ್ಮು, ಜ್ವರ, ಶೀತ, ಗಂಟಲು, ತಲೆ ನೋವು, ಹೊಟ್ಟೆ ನೋವು ಮುಂತಾದ ಲಕ್ಷಣ ಎಲ್ಲೆಡೆ ಹೆಚ್ಚಾಗಿದ್ದು ವೈದ್ಯರ ಬಳಿ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ ಜನ ಸಾಮಾನ್ಯರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಳೆ, ಚಳಿ, ಸದಾ ಮೋಡ ಇರುವ ಕಾಲದಲ್ಲಿ ಸಾಮಾನ್ಯವಾಗಿ ಹೊಸ ವೈರಸ್ಗಳು ಉತ್ಪತ್ತಿಯಾಗುತ್ತವೆ. ಕೆಲವೊಂದು ಹವಾಮಾನದಲ್ಲಿ ಅಷ್ಟು ಸುಲಭವಾಗಿ ವೈರಸ್ಗಳು ಸಾಯುವುದಿಲ್ಲ. ಹವಾಮಾನ ಬದಲಾಗುತ್ತಿದ್ದಂತೆ ಹೊಸ ವೈರಸ್ಗಳು ಹುಟ್ಟಿಕೊಳ್ಳುವುದು ಸಾಮಾನ್ಯ. ಆದರೆ, ಕೆಲ ಪ್ರತಿಕೂಲ ಹವಾಮಾನದಿಂದ ವೈರಸ್ಗಳು ಬೇಗ ಹರಡುತ್ತವೆ ಎಂದು ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಪ್ರೊಫೆಸರ್ ಹಾಗೂ ಮಕ್ಕಳ ವೈದ್ಯಶಾಸ್ತ್ರ ವಿಭಾಗದ ವೈದ್ಯ ಡಾ.ಎನ್. ನಿಜಗುಣ ಮಾಹಿತಿ ನೀಡಿದ್ದಾರೆ.

ಹವಾಮಾನದಲ್ಲಿ ದಿನಕ್ಕೊಂದು ವೈಪರೀತ್ಯ ಕಾಣುತ್ತೇವೆ. ಈ ಕಾರಣ ಗಳಿಂದಾಗಿ ವೈರಲ್ ಜ್ವರಗಳು ಹೆಚ್ಚುತ್ತಿವೆ.ಮುಖ್ಯವಾಗಿ ವೈರಲ್ ಜ್ವರವು ಉಸಿರಾಟದಿಂದ ಹರಡುತ್ತದೆ. ಜ್ವರಕ್ಕೆ ಒಳಗಾದ ವ್ಯಕ್ತಿಗಳು ಮಾಸ್ಕ್ ಧರಿಸದೇ ಮತ್ತೂಬ್ಬ ವ್ಯಕ್ತಿಯ ಬಳಿ ಬಂದು ಉಸಿರಾಡಿದಾಗ ಆತನ ದೇಹದಲ್ಲಿದ್ದ ವೈರಸ್ಗಳು ಬೇರೆಯವರಿಗೆ ಹರಡುವ ಸಾಧ್ಯತೆಗಳಿರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ.