ಕಾಂಗ್ರೆಸ್ ನಲ್ಲಿ ಕುರ್ಚಿ ಕಾಳಗದ ಚರ್ಚೆ ಜೋರಾಗೇ ನಡೀತಿದೆ. ಪೂರ್ಣ ಪ್ರಮಾಣದ ಸರ್ಕಾರ ಬಂದರೂ ಅಧಿಕಾರ ನಡೆಸೋದಕ್ಕೆ ಸ್ವಪಕ್ಷದವರೇ ಬಿಡ್ತಾ ಇಲ್ಲ ಅನ್ನೋದೆ ದುರಂತದ ಸಂಗತಿ. ಒಪ್ಪಂದ ಆಗಿದೆಯೋ ಇಲ್ವೋ ರಾಜ್ಯದ ಜನರಿಗೆ ಗೊತ್ತಿಲ್ಲ. ಆದರೆ ಇವರ ಕಿತ್ತಾಟ, ಮಾತು ಕಥೆ ನೋಡಿದರೆ ಒಪ್ಪಂದ ಆಗಿರೋದು ನಿಜ ಅಂತ ಜನ ಮಾತನಾಡುವಂತಾಗಿದೆ. ಇದರ ಮಧ್ಯೆ ಆಗಿಂದಾಗ್ಲೇ ಹೈ ಕಮಾಂಡ್ ನಾಯಕರುಗಳನ್ನ ರಾಜ್ಯದ ಸಚಿವರು ಭೇಟಿಯಾಗಿ ಚರ್ಚೆ ನಡೆಸುತ್ತಿರೋದು ಕುತೂಹಲ ಮೂಡಿಸಿದೆ.
ಹೌದು, ಯಾವುದೇ ವಿಚಾರವಾಗಿ ಮಲ್ಲಿಕಾರ್ಜುನ್ ಖರ್ಗೆ ಭೇಟಿಯಾದ್ರೆ, ಕುರ್ಚಿ ಬದಲಾವಣೆ ವಿಚಾರವೇ ಚರ್ಚೆ ಮಾಡಲಾಗಿದೆ ಅನ್ನೋ ಮಾತು ಕೇಳಿ ಬರ್ತಾ ಇದೆ. ಇದೀಗ ಮತ್ತೊಮ್ಮೆ ಈ ವಿಚಾ ಸದ್ದು ಮಾಡ್ತಾ ಇದೆ. ಇದಕ್ಕೆ ಕಾರಣ ನಿನ್ನೆ ಸದಾಶಿವನಗರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನ ಡಿಕೆ ಶಿವಕುಮಾರ್ ಭೇಟಿಯಾಗಿದ್ದು ಸದ್ದು ಮಾಡ್ತಾ ಇದೆ. ಸುಮಾರು ಹೊತ್ತು ಈ ನಾಯಕರು ಮಾತುಕತೆ ಮಾಡಿದ್ದಾರೆ.

ಹೌದು, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಡುವೆ ಕುರ್ಚಿ ಕಾಳಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ. ಎಲ್ಲಿಯವರೆಗೆ ಈ ಚರ್ಚೆ ಜೀವಂತ ಇಡೋದು ಮುಗಿಸಿಬಿಡೋಣ ಹಂತಕ್ಕೆ ನಾಯಕರು ಬಂದ್ರಾ ಅನ್ನೋದು ಸದ್ಯದ ಪ್ರಶ್ನೆ. ಆದರೆ ಹೊಸ ವಿಚಾರ ಏನಪ್ಪ ಅಂದ್ರೆ, ಬಜೆಟ್ ಅಧಿವೇಶನ ನಂತರ ಸಿದ್ದರಾಮಯ್ಯನವ್ರು ಕುರ್ಚಿ ಖಾಲಿ ಮಾಡಬೇಕಾಗುತ್ತೆ ಅಂತಾ ಡಿ.ಕೆ ಆಪ್ತರು ಮಾತಾಡಿಕೊಳ್ತಿದ್ದಾರೆ. ಈ ವಿಚಾರವಾಗಿಯೇ ಮಲ್ಲಿಕಾರ್ಜುನ ಖರ್ಗೆಯವ್ರನ್ನೂ ಭೇಟಿ ಮಾಡಿದ್ರು ಅಂತ ರಾಜಕೀಯ ಪಡಸಾಲಯಲ್ಲಿ ಚರ್ಚೆ ಆಗ್ತಾ ಇದೆ. ಪವರ್ ಶೇರಿಂಗ್ ಬಗ್ಗೆಯೇ ಖರ್ಗೆ ಜೊತೆ ಗಂಭೀರ ಮಾತುಕತೆ ನಡೆಸಿದ್ದಾರಂತೆ ಡಿಕೆ ಶಿವಕುಮಾರ್.
ಡಿಸಿಎಂ ಡಿಕೆ ಶಿವಕುಮಾರ್ ಎದುರು ನೋಡ್ತಾ ಇರೋ ಆ ದಿನಕ್ಕೆ ಮುಹೂರ್ಥ ಕೂಡ ಫಿಕ್ಸ್ ಆಗಿಬಿಟ್ಟಂತೆಯಂತೆ. ಬಜೆಟ್ ಅಧಿವೇಶನ ನಂತ್ರ ರಾಜ್ಯ ಕಾಂಗ್ರೆಸ್ ನಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿಯೇ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವ್ರನ್ನ ಡಿಕೆ ಶಿವಕುಮಾರ್ ಭೇಟಿ ಮಾಡಿ ಇಪ್ಪತ್ತು ನಿಮಿಷಗಳ ಕಾಲ ರಹಸ್ಯ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 31ಕ್ಕೆ ಸಿಎಂ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡು ಎರಡೂವರೆ ವರ್ಷ ಪೂರ್ಣಗೊಳ್ಳುತ್ತೆ. ಅಧಿಕಾರ ಒಪ್ಪಂದ ಸೂತ್ರದಂತೆ ನಡೆದುಕೊಳ್ಳಿ ಅಂತಾ ಮಲ್ಲಿಕಾರ್ಜುನ ಖರ್ಗೆ ಮುಂದೆ ಡಿಕೆ ಶಿವಕುಮಾರ್ ಒತ್ತಡ ಹಾಕಿದ್ದಾರಂತೆ. ಅಲ್ಲದೇ ಏಪ್ರಿಲ್ನಲ್ಲಿ ಸಂಪುಟ ಪುನರ್ ರಚನೆಗೂ ಆಗ್ರಹಿಸಿದ್ದಾರೆ ಅಂತಾ ಗೊತ್ತಾಗಿದೆ. ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ, ಎಂಎಲ್ ಸಿ ಎಲೆಕ್ಷನ್ ಬಗ್ಗೆಯೂ ಮಹತ್ವದ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಹೀಗಾಗಿ ಸಿಎಂ ಕುರ್ಚಿ ಕಲಹ ಕುತೂಹಲ ಘಟ್ಟಕ್ಕೆ ತಲುಪುತ್ತಿದ್ಯಾ ಅನ್ನೋ ಪ್ರಶ್ನೆ ಎದ್ದಿದೆ. ಹೀಗಾಗಿ ಹೈಕಮಾಂಡ್ ತೀರ್ಮಾನದ ಬಗ್ಗೆ ಸಿದ್ದು ಅಂಡ್ ಟೀಂಗೆ ದಿನೇ ದಿನೇ ಆತಂಕ ಹೆಚ್ಚಾಗ್ತಿದೆ. ಖಡಕ್ ವಾರ್ನಿಂಗ್ ಮೂಲಕ ಸಿದ್ದು ಆಪ್ತರಿಗೆ ಹೈಕಮಾಂಡ್ ಈಗಾಗಲೇ ಮೂಗುದಾರ ಹಾಕ್ತಿದೆ. ಇದೆಲ್ಲದರ ನಡುವೆ ಸಿಎಂ ಕೂಡ ಎಚ್ಚರಿಕೆಯ ಹೆಜ್ಜೆ ಇಡಲು ಮುಂದಾಗಿದ್ದಾರೆ. ಶಾಸಕರ ಬೆಂಬಲದ ಜೊತೆ ಹೈಕಮಾಂಡ್ ಕೃಪೆಗೆ ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದಾರೆ. ಈ ಮೂಲಕ ಡಿಕೆಶಿ ತಂತ್ರವನ್ನೇ ಅನುಸರಿಸ್ತಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಸಿದ್ದರಾಮಯ್ಯ ಮಾತಿನ ವರಸೆ ಕೊಂಚ ಬದಲಾಗಿದೆ ಎಂಬುದು ಅವರ ಹೇಳಿಕೆಗಳಿಂದ ಗೊತ್ತಾಗುತ್ತಿದೆ. ಇಷ್ಟ ದಿನ ಡಿಕೆಶಿ ಹೈಕಮಾಂಡ್ ಹೇಳಿದಂತೆ ಅನ್ನೋ ಮಾತುಗಳನ್ನ ಹೇಳುತ್ತಿದ್ದರು. ಇದೀಗ ಡಿಕೆಯಂತೆ ಸಿದ್ದರಾಮಯ್ಯರಿಂದಲೂ ಹೈಕಮಾಂಡ್ ಜಪ ಶುರುವಾಗಿದೆ. ಮೊದಲು ಐದು ವರ್ಷವೂ ನಾನೇ ಸಿಎಂ, ಪವರ್ ಶೇರಿಂಗ್ ಬಗ್ಗೆ ಯಾವ ಒಪ್ಪಂದವೂ ಆಗಿಲ್ಲ ಅಂತಿದ್ರು. ಆದ್ರೆ ಇತ್ತೀಚೆಗೆ ಹೈಕಮಾಂಡ್ ತೀರ್ಮಾನವೇ ಅಂತಿಮ ಎನ್ನುತ್ತಿದ್ದಾರೆ. ಈ ಕಡೆ ಖರ್ಗೆ ಹೇಳಿದ್ದಾರೆ. ಅದನ್ನ ಪಾಲನೆ ಮಾಡ್ತೀನಿ ಅಂತಾ ಡಿಕೆಶಿ ಹೇಳ್ತಿದ್ದಾರೆ.

ಇತ್ತ ಇದೆಲ್ಲರ ನಡುವೆ ಸಿದ್ದರಾಮಯ್ಯ – ಡಿಕೆಶಿ ನಡುವಿನ ಅಂತಃಕಲಹ ತಾತಕಕ್ಕೇರುತ್ತಿದ್ದಂತೆ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಮಂಕಾದಂತೆ ಕಾಣ್ತಿದೆ. ದಲಿತ ಸಿಎಂ ಕೂಗು ಎತ್ತಿದ್ದ ಸತೀಶ್ ಜಾರಕಿಹೊಳಿ, ಪರಮೇಶ್ವರ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ಡಿಕೆಶಿ ಜೊತೆ ಪೈಪೋಟಿಯೇ ಬೇಡವೆಂದು ಸಿಎಂ ರೇಸ್ ನಿಂದ ಈ ನಾಯಕರು ಹಿಂದೆ ಸರಿದು ಬಿಟ್ರಾ ಅನ್ನೋ ಪ್ರಶ್ನೆ ಎದ್ದಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಾಯಿಸ್ತಿದ್ದ ದಲಿತ ಸಚಿವರ ಅಸ್ತ್ರವನ್ನೇ ಡಿಕೆಶಿ ಬ್ರಹ್ಮಾಸ್ತ್ರ ಮಾಡಿಕೊಂಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನ ನೇಮಿಸಿ ಎಂದು ಡಿಕೆಶಿಯೇ ಒತ್ತಡ ಹಾಕುತ್ತಿದ್ದಾರಂತೆ. ಈ ಮೂಲಕ ಸಿಎಂ ಕುರ್ಚಿಗಾಗಿ ಹೈಕಮಾಂಡ್ ಮೇಲೆ ಡಿಕೆಶಿ ತೀವ್ರವಾಗಿ ಡಿಮ್ಯಾಂಡ್ ಮಾಡ್ತಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಶೀಘ್ರ ತೀರ್ಮಾನ ತೆಗೆದುಕೊಳ್ಳಿ. ವಚನ ಕೊಟ್ಟಂತೆ ನಡೆದುಕೊಳ್ಳಿ ಅಂತಾ ಡಿ.ಕೆ ಶಿವಕುಮಾರ್ ಮುಲಾಜಿಲ್ಲದೇ ಹೇಳಿದ್ದಾರಂತೆ. ಇದು ದಲಿತ ಸಚಿವರನ್ನ ಕಟ್ಟಿ ಹಾಕಿದೆ ಎನ್ನಲಾಗುತ್ತಿದೆ.