ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 721ರ ಎಪಿಸೋಡ್ ಕಥೆ ಇಲ್ಲಿದೆ. ಮಗಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಬೇಕು ಎಂಬ ಆಸೆಯಿಂದ ಭಾಗ್ಯಾ, ಬಣ್ಣ ಹಚ್ಚಿಕೊಂಡು ಜೋಕರ್ ವೇಷ ತೊಟ್ಟು ಹೋಟೆಲ್ನಲ್ಲಿ ಡ್ಯಾನ್ಸ್ ಮಾಡುತ್ತಾಳೆ. ಅಲ್ಲಿ ತಾಂಡವ್ ಹಾಗೂ ಶ್ರೇಷ್ಠಾ ಜೊತೆ ಮಗಳನ್ನು ನೋಡಿ ಶಾಕ್ ಆಗುತ್ತಾಳೆ. ನನ್ನ ಮಗಳು ಖುಷಿಯಾಗಿದ್ದರಷ್ಟೇ ಸಾಕು, ಯಾರು ಹುಟ್ಟುಹಬ್ಬ ಆಚರಿಸಿದರೇನು? ಅವಳು ಯಾವಾಗಲೂ ನಗುತ್ತಾ ಇರಬೇಕು ಎಂದುಕೊಂಡು ಭಾಗ್ಯಾ ಮಗಳಿಗಾಗಿ ಮೊಬೈಲ್ ಖರೀದಿಸಿ ಮನೆಗೆ ಬರುತ್ತಾಳೆ.
ಮನೆಯಲ್ಲಿ ತನ್ವಿ ಹುಟ್ಟುಹಬ್ಬಕ್ಕೆ ಎಲ್ಲಾ ತಯಾರಿ ಆಗಿರುತ್ತದೆ. ರೆಸಾರ್ಟ್ನಲ್ಲಿ ಅಷ್ಟು ಅದ್ದೂರಿಯಾಗಿ ಬರ್ತ್ಡೇ ಆಚರಿಸಿಕೊಂಡ ತನ್ವಿಗೆ ನನ್ನ ಸೆಲಬ್ರೇಷನ್ ಇಷ್ಟವಾಗುವುದೋ ಇಲ್ಲವೋ, ನಾನು ಕೊಟ್ಟ ಮೊಬೈಲ್ ಅವಳಿಗೆ ಇಷ್ಟವಾಗುವುದೋ ಇಲ್ಲವೋ, ಅವಳು ಅಲ್ಲಿ ಅಷ್ಟು ದೊಡ್ಡ ಕೇಕ್ ಕಟ್ ಮಾಡಿದಳು, ನಾನು ಮಾಡಿದ ಕೇಕ್ ನೋಡಿ ಏನೆಂದುಕೊಳ್ಳುತ್ತಾಳೋ ಏನೋ ಎಂದು ಅನುಮಾನದಿಂದಲೇ ಭಾಗ್ಯಾ ಬರ್ತ್ಡೇಗೆ ಎಲ್ಲಾ ಅರೇಂಜ್ ಮಾಡುತ್ತಾಳೆ. ತನ್ವಿ ಮಗುವಾಗಿದ್ದಾಗ ಧರಿಸುತ್ತಿದ್ದ ಬಟ್ಟೆಗಳು, ಬಳೆಗಳನ್ನು ಬಳಸಿ ಡೆಕೊರೇಷನ್ ಮಾಡುತ್ತಾಳೆ. ಮಗಳ ಬಾಲ್ಯದ ಫೋಟೋಗಳನ್ನೂ ಇಡುತ್ತಾಳೆ. ಅಷ್ಟರಲ್ಲಿ ತಾಂಡವ್, ಮಗಳನ್ನು ಕರೆದುಕೊಂಡು ಮನೆಗೆ ಬರುತ್ತಾನೆ. ಕಳೆದ ಬಾರಿ ನೀನು ಬಂದಿದ್ದರಿಂದ ದೊಡ್ಡ ಅವಾಂತರವಾಯ್ತು. ಈಗ ಬಂದು ಮತ್ತೊಂದು ಅವಾಂತರ ಮಾಡುವುದು ಬೇಡ, ನೀನು ಇಲ್ಲೇ ಇರು ಎಂದು ಶ್ರೇಷ್ಠಾಳನ್ನು ಹೊರಗೆ ನಿಲ್ಲಿಸಿ ತಾಂಡವ್ ಒಳಗೆ ಬರುತ್ತಾನೆ.
ನೀನು ಇಲ್ಲಿಗೆ ಏಕೆ ಬಂದೆ ಎಂದು ಧರ್ಮರಾಜ್, ತಾಂಡವ್ನನ್ನು ಕೇಳುತ್ತಾನೆ. ನನ್ನ ಮಗಳನ್ನು ವಾಪಸ್ ಮನೆಗೆ ಬಿಡಲು ಬಂದೆ, ಅಷ್ಟೇ ಅಲ್ಲ ಭಾಗ್ಯಾ ಮೇಡಂ ತನ್ವಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಪ್ಲ್ಯಾನ್ ಮಾಡಿದ್ದಾರೆ ಎಂದು ಕೇಳಲ್ಪಟ್ಟೆ ಅದನ್ನು ನೋಡಲು ಬಂದೆ ಎಂದು ಕೊಂಕು ಮಾತನಾಡುತ್ತಾನೆ. ಅಲ್ಲಿ ಡೆಕೊರೇಷನ್ ನೋಡಿ ನಗಲು ಆರಂಭಿಸುತ್ತಾನೆ. ಏಕೆ ನಗುತ್ತಿರುವೆ ಎಂದು ಧರ್ಮರಾಜ್, ಮಗನನ್ನು ಕೇಳುತ್ತಾನೆ. ಇದನ್ನು ಯಾರಾದರೂ ಡೆಕೊರೇಷನ್ ಎನ್ನುತ್ತಾರಾ ಎಂದು ತಾಂಡವ್ ಕೇಳುತ್ತಾನೆ. ಅದರಲ್ಲಿ ಏನು ತಪ್ಪು? ಭಾಗ್ಯಾ, ಮಗಳ ಬಾಲ್ಯದ ಬಟ್ಟೆಗಳನ್ನೆಲ್ಲಾ ಬಳಸಿ ಈ ರೀತಿ ಡೆಕೊರೇಷನ್ ಮಾಡಿದ್ದಾಳೆ. ಅದರಲ್ಲಿ ಏನು ತಪ್ಪಿದೆ ಎಂದು ಕುಸುಮಾ ಕೂಡಾ ಕೇಳುತ್ತಾಳೆ.
ಇದೆಲ್ಲಾ ನಿಮ್ಮಂಥವರಿಗೆ ಇಷ್ಟವಾಗಬೇಕು ಅಷ್ಟೇ ಎಂದು ತಾಂಡವ್, ಭಾಗ್ಯಾಳನ್ನು ಅಪಹಾಸ್ಯ ಮಾಡುತ್ತಾಳೆ. ಬೇರೆ ಡ್ರೆಸ್ ಬದಲಿಸಿಕೊಳ್ಳುವಂತೆ ಪೂಜಾ, ತನ್ವಿಗೆ ಹೇಳುತ್ತಾಳೆ. ನನಗೆ ಹೊಸ ಬಟ್ಟೆ ತಂದಿದ್ದೀರಾ ಎಂದು ತನ್ವಿ ಖುಷಿಯಿಂದ ಕೇಳುತ್ತಾಳೆ. ಹೊಸ ಬಟ್ಟೆ ತಂದಿಲ್ಲ, ಆದರೆ ಸಂಕ್ರಾಂತಿ ಹಬ್ಬಕ್ಕೆ ತಂದ ಬಟ್ಟೆಯನ್ನೆ ಹಾಕಿಕೊಂಡು ಬಾ ಎಂದು ಹೇಳುತ್ತಾಳೆ. ಅದು ಬೇಡ ಈ ಬಟ್ಟೆಯೇ ತುಂಬಾ ಚೆನ್ನಾಗಿದೆ, ಅಪ್ಪ ಕೊಡಿಸಿದ ಬಟ್ಟೆಯಲ್ಲಿ ನಾನು ಪ್ರಿನ್ಸೆಸ್ ರೀತಿ ಕಾಣುತ್ತಿದ್ದೇನೆ, ಇದೇ ಡ್ರೆಸ್ ಇರಲಿ ಎಂದು ಹೇಳುತ್ತಾಳೆ. ಕೇಕ್ ಕಟಿಂಗ್ ಮಾಡಿದ ನಂತರ ಭಾಗ್ಯಾ, ತನ್ವಿಗೆ ತಾನು ತಂದ ಮೊಬೈಲ್ ಕೊಡುತ್ತಾಳೆ. ಆ ಬಾಕ್ಸ್ ನೋಡಿದಾಗ ತನ್ವಿ ಖುಷಿಯಾಗುತ್ತಾಳೆ. ಆದರೆ ಅದರಲ್ಲಿ ಮೊಬೈಲ್ ಇರುವುದನ್ನು ನೋಡಿ ಅಮ್ಮ ನೀನು ಏಕೆ ಮೊಬೈಲ್ ತಂದೆ, ಅಪ್ಪ ಕೂಡಾ ನನಗೆ ಮೊಬೈಲ್ ಕೊಡಿಸಿದ್ದಾರೆ. ಎಷ್ಟು ಚೆನ್ನಾಗಿದೆ ನೋಡು ಎಂದು ತಾಂಡವ್ ಕೊಡಿಸಿದ ಮೊಬೈಲನ್ನು ಎಲ್ಲರಿಗೂ ತೋರಿಸುತ್ತಾಳೆ.
ತನ್ವಿಗೆ ಮೊಬೈಲ್ ಕೊಡಿಸಿರುವುದಕ್ಕೆ ಭಾಗ್ಯಾ-ತಾಂಡವ್ ಇಬ್ಬರಿಗೂ ಕುಸುಮಾ ಬೈಯ್ಯುತ್ತಾಳೆ. ಭಾಗ್ಯಾ, ಮಗಳ ಓದಿಗೆ ಸಹಾಯವಾಗಲಿ ಎಂದು ಆ ಮೊಬೈಲ್ ಕೊಡಿಸಿದ್ದಾಳೆ. ಅದರೆ ತಾಂಡವ್ ದೊಡ್ಡಸ್ತಿಕೆ ತೋರಿಸಲು ಮೊಬೈಲ್ ಕೊಡಿಸಿದ್ದಾನೆ ಎಂದು ಧರ್ಮರಾಜ್ ಹೇಳುತ್ತಾನೆ. ಅದಕ್ಕೆ ಕೋಪಗೊಳ್ಳುವ ತಾಂಡವ್, ನಾನು ದೊಡ್ಡಸ್ತಿಕೆ ತೋರಿಸಬೇಕು ಎಂದುಕೊಂಡಿದ್ದರೆ ನನ್ನ ಮಗಳಿಗೆ ಒಂದು ಕಾರನ್ನೇ ಕೊಡಿಸುತ್ತಿದ್ದೆ. ತನ್ವಿ ನಿನಗೆ ನಾನು ಕೊಡಿಸಿದ ಮೊಬೈಲ್ ಇಷ್ಟವಿಲ್ಲದಿದ್ದರೆ ಅದನ್ನು ಎಸೆದುಬಿಡು ಎನ್ನುತ್ತಾನೆ. ಆದರೆ ತನ್ವಿ ಎರಡೂ ಮೊಬೈಲನ್ನು ಒಮ್ಮೆ ನೋಡಿ ಅಮ್ಮ ಕೊಟ್ಟ ಮೊಬೈಲನ್ನು ವಾಪಸ್ ಕೊಟ್ಟು, ನನಗೆ ಅಪ್ಪ ಕೊಟ್ಟ ಮೊಬೈಲ್ ಇರಲಿ ಎಂದು ಅಲ್ಲಿಂದ ಹೋಗುತ್ತಾಳೆ.
ತನ್ವಿಗೆ ತಾನು ಕೊಡಿಸಿದ ಮೊಬೈಲ್ ಇಷ್ಟವಾಗಿದೆ ಎಂಬುದನ್ನು ತಿಳಿದು ತಾಂಡವ್ ಖುಷಿಯಾಗುತ್ತಾನೆ. ಮನೆಗೆ ಬಂದು ಸಿಹಿ ತಿನ್ನುತ್ತಾನೆ. ತನ್ವಿ, ನಾನು ಕೊಡಿಸಿದ ಮೊಬೈಲ್ ತೆಗೆದುಕೊಂಡು ಹೋದಾಗ ಆ ಎಮ್ಮೆ ಭಾಗ್ಯಾ ಮುಖ ನೋಡಬೇಕಿತ್ತು. ನನಗಂತೂ ಬಹಳ ಖುಷಿಯಾಗುತ್ತಿದೆ ಎಂದು ಹೇಳಿಕೊಂಡು ಶ್ರೇಷ್ಠಾ ಬಳಿ ಸಂತೋಷ ಹಂಚಿಕೊಳ್ಳುತ್ತಾನೆ.
ತನ್ವಿ ನಿಜಕ್ಕೂ ಭಾಗ್ಯಾಳನ್ನು ನಿರ್ಲಕ್ಷಿಸುತ್ತಿದ್ದಾಳಾ? ಮಕ್ಕಳನ್ನು ತನ್ನತ್ತ ಸೆಳೆಯಲು ತಾಂಡವ್ ಮತ್ತೇನು ಪ್ಲ್ಯಾನ್ ಮಾಡುತ್ತಾನೆ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.