ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 757ರ ಎಪಿಸೋಡ್ ಕಥೆ ಇಲ್ಲಿದೆ. ಭಾಗ್ಯಾ ಹೊಸದಾಗಿ ಕ್ಯಾಟರಿಂಗ್ ಬಿಸ್ನೆಸ್ ಆರಂಭಿಸಿದ್ದಾಳೆ. ಅದಕ್ಕೆ ಕೈ ತುತ್ತು ಎಂದು ಹೆಸರಿಟ್ಟಿದ್ದಾಳೆ. ನಿಧಾನವಾಗಿ ಅವಳ ಬಿಸ್ನೆಸ್ ಸುಧಾರಿಸುತ್ತಿದೆ. ಯುಗಾದಿ ಹಬ್ಬದ ದಿನ ಭಾಗ್ಯಾ ಮಾಡಿದ ಅಡುಗೆಗೆ ಮೆಚ್ಚುಗೆ ದೊರೆತಿದೆ. ಛಲಗಾತಿ ಭಾಗ್ಯಾ ಸೈಕಲ್ ತುಳಿದು, ಆರ್ಡರ್ ಕೊಟ್ಟವರಿಗೆ ಊಟ ತಲುಪಿಸಿ ಸಾಧನೆ ಮಾಡಿದ್ದಾಳೆ.
ಭಾಗ್ಯಾ ವಿರುದ್ಧ ಕತ್ತಿ ಮಸೆಯುತ್ತಿರುವ ತಾಂಡವ್ಗೆ ತನ್ಮಯ್ ಸ್ಕೂಲ್ ಫೀಸ್ ನೆನಪಾಗುತ್ತದೆ. ಇವತ್ತೇ ಕೊನೆ ದಿನ , ಆ ಭಾಗ್ಯಾಗೆ ಖಂಡಿತ ತನ್ಮಯ್ ಫೀಸ್ ಕಟ್ಟಲು ಆಗುವುದಿಲ್ಲ, ಈ ಬಾರಿ ಖಂಡಿತ ನಾನೇ ಗೆಲ್ಲೋದು ಎಂದು ತಾಂಡವ್ ಖುಷಿಯಾಗುತ್ತಾನೆ. ತನ್ಮಯ್ ಜೊತೆ ಮಾತನಾಡಲು ತನ್ವಿಗೆ ಕರೆ ಮಾಡುತ್ತಾನೆ. ತನ್ಮಯ್ ಇವತ್ತು ನಿನ್ನ ಸ್ಕೂಲ್ ಫೀಸ್ ಕಟ್ಟಲು ಕೊನೆ ದಿನ ಅಂತ ನನಗೆ ಗೊತ್ತು, ನೀನು ತಲೆ ಕೆಡಿಸಿಕೊಳ್ಳಬೇಡ, ನಾನು ಬಂದು ಕಟ್ಟುತ್ತೇನೆ ಎನ್ನುತ್ತಾನೆ. ಅಪ್ಪ ನೀವು ತಲೆ ಕೆಡಿಸಿಕೊಳ್ಳಬೇಡಿ, ಅಮ್ಮ ನನ್ನ ಸ್ಕೂಲ್ ಫೀಸ್ ಕಟ್ಟುತ್ತೇನೆ ಎಂದು ಹೇಳಿದ್ದಾರೆ ಎಂದು ತನ್ಮಯ್ ಹೇಳುತ್ತಾನೆ. ಅದನ್ನು ಕೇಳಿ ತಾಂಡವ್ ನಗಲು ಆರಂಭಿಸಿದ್ದಾನೆ. ಹೌದಾ, ಹೇಗೆ ಕಟ್ಟುತ್ತಾಳೆ ಎಂದು ಕೇಳುತ್ತಾನೆ. ಅದನ್ನು ಕೇಳಿಸಿಕೊಳ್ಳುವ ಕುಸುಮಾ, ಮೊಮ್ಮಗನಿಂದ ಪೋನ್ ಕಸಿದುಕೊಳ್ಳುತ್ತಾಳೆ.
ಮಕ್ಕಳನ್ನು ಏನೋ ಕೇಳುತ್ತೀಯ? ನನ್ನ ಕೇಳು ಹೇಳುತ್ತೇನೆ, ಭಾಗ್ಯಾ ಹೊಸದಾಗಿ ಕ್ಯಾಟರಿಂಗ್ ಬಿಸ್ನೆಸ್ ಆರಂಭಿಸಿದ್ದಾಳೆ. ಅವಳ ಬಿಸ್ನೆಸ್ ದಿನೇ ದಿನೇ ಅಭಿವೃದ್ಧಿ ಆಗುತ್ತಿದೆ. ನೀನು ಫೀಸ್ ಕಟ್ಟುವುದಿಲ್ಲ ಎಂದ ಮಾತ್ರಕ್ಕೆ ನನ್ನ ಸೊಸೆ ಸುಮ್ಮನೆ ಕೂರುವುದಿಲ್ಲ. ಅವಳು ನನ್ನ ಮೊಮ್ಮಗನ ಸ್ಕೂಲ್ ಫೀಸ್ ಕಟ್ಟುತ್ತಾಳೆ, ಇದನ್ನೆಲ್ಲಾ ಮಕ್ಕಳ ಬಳಿ ಹೇಳೋಕೆ ನಿನಗೆ ನಾಚಿಕೆ ಆಗುವುದಿಲ್ಲವಾ ಎಂದು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಭಾಗ್ಯಾ ಹೊಸ ಬಿಸ್ನೆಸ್ ಶುರು ಮಾಡಿದ್ದಾಳೆ ಎಂದು ತಿಳಿದು ತಾಂಡವ್ ಇನ್ನಷ್ಟು ಸಿಟ್ಟಾಗುತ್ತಾನೆ. ನಾನು ಏನು ಮಾಡಿದರೂ ಅವಳನ್ನು ಸೋಲಿಸಲು ಆಗುತ್ತಿಲ್ಲ ಎಂದು ಗೊಣಗುತ್ತಾನೆ. ತಾಂಡವ್ ಚಡಪಡಿಕೆ ನೋಡಿ ಶ್ರೇಷ್ಠಾ, ಏನು ವಿಷಯ ಎಂದು ಕೇಳುತ್ತಾಳೆ. ಅಷ್ಟೇನಾ ನೀನು ಏನೂ ಚಿಂತೆ ಮಾಡಬೇಡ, ಇವತ್ತು ಭಾಗ್ಯಾ ಸ್ಕೂಲ್ ಫೀಸ್ ಕಟ್ಟುವುದಿಲ್ಲ, ಅದನ್ನು ನೀನೇ ಕಟ್ಟಿ ಅವಳನ್ನು ಸೋಲಿಸುತ್ತೀಯ ನೋಡುತ್ತಿರು ಎನ್ನುತ್ತಾಳೆ.
ತನ್ನ ಗೆಳತಿಗೆ ಹೇಳಿ ಶ್ರೇಷ್ಠಾ, ಭಾಗ್ಯಾಗೆ ಕರೆ ಮಾಡಿ ಮನೆಯ ಫಂಕ್ಷನ್ಗೆ 100 ಜನರಿಗೆ ಊಟ ಬೇಕು ಎಂದು ಸುಳ್ಳು ಆರ್ಡರ್ ಮಾಡುತ್ತಾಳೆ. ಇಂದು ಸಾಧ್ಯವಿಲ್ಲ ನನಗೆ ಬೇರೆ ಕೆಲಸವಿದೆ ಎಂದು ಭಾಗ್ಯಾ ಹೇಳುತ್ತಾಳೆ. ಏಕೆ ಆರ್ಡರ್ ತೆಗೆದುಕೊಳ್ಳಲಿಲ್ಲ ಎಂದು ಕುಸುಮಾ ಕೇಳುತ್ತಾಳೆ. ಗುಂಡಣ್ಣನ ಫೀಸ್ ಕಟ್ಟಲು ಮಾತ್ರ ದುಡ್ಡಿದೆ ಅತ್ತೆ ಎಂದು ಭಾಗ್ಯಾ ಉತ್ತರಿಸುತ್ತಾಳೆ. ಹಾಗಾದರೆ ಆ ದುಡ್ಡಿನಿಂದ ರೇಷನ್ ತೆಗೆದುಕೋ, ಅವರಿಗೆ ಊಟ ಕೊಡುತ್ತಿದ್ದಂತೆ ಹಣ ತೆಗೆದುಕೊಂಡು ಸ್ಕೂಲ್ ಫೀಸ್ ಕಟ್ಟು ಎಂದು ಕುಸುಮಾ ಐಡಿಯಾ ಕೊಡುತ್ತಾಳೆ. ಭಾಗ್ಯಾಗೆ ಅದು ಸರಿ ಎನಿಸಿ, ಮತ್ತೆ ಅದೇ ನಂಬರಿಗೆ ಕರೆ ಮಾಡಿ ಆರ್ಡರ್ ತೆಗೆದುಕೊಳ್ಳುತ್ತೇನೆ. ಆದರೆ ನೀವು ಊಟ ದೊರೆತ ಕೂಡಲೇ ಹಣ ಕೊಡಬೇಕು ಎಂದು ಕಂಡಿಷನ್ ಮಾಡುತ್ತಾಳೆ. ಆರ್ಡರ್ ನೀಡಿದ ಯುವತಿ, ಖಂಡಿತ ಹಣ ಕೊಡುವೆ ಎನ್ನುತ್ತಾಳೆ.
ಭಾಗ್ಯಾ ಹಾಗೂ ಸುಂದ್ರಿ ಹೋಗಿ ರೇಷನ್ ತಂದು ಅಡುಗೆ ರೆಡಿ ಮಾಡುತ್ತಾರೆ. ಭಾಗ್ಯಾ ಊಟ ಡೆಲಿವರಿ ಕೊಡಲು ಹೊರಡುತ್ತಾಳೆ. ತಾಂಡವ್ಗೆ ಈ ವಿಚಾರವನ್ನು ಶ್ರೇಷ್ಠಾ ಹೇಳುತ್ತಾಳೆ. ಭಾಗ್ಯಾ ತನ್ನಲ್ಲಿರುವ ಹಣದಿಂದ ರೇಷನ್ ತೆಗೆದುಕೊಂಡು ತಂದಿದ್ದಾಳೆ. ಕೊನೆ ಸಮಯದಲ್ಲಿ ಫಂಕ್ಷನ್ ಕ್ಯಾನ್ಸಲ್ ಆಯ್ತು ಎಂದು ನಾವು ಅವಳಿಗೆ ಕೈ ಕೊಡುತ್ತೇವೆ. ಆಗ ಅವಳು ಸ್ಕೂಲ್ ಫೀಸ್ ಕಟ್ಟೋಕೆ ಆಗುವುದಿಲ್ಲ ಎನ್ನುತ್ತಾಳೆ. ಅದನ್ನು ಕೇಳಿ ತಾಂಡವ್ ಖುಷಿಯಾಗುತ್ತಾನೆ. ಶ್ರೇಷ್ಠಾಳನ್ನು ಹೊಗಳುತ್ತಾನೆ. ಇವತ್ತು ನಾನು ಆಫೀಸಿಗೆ ಒಳ್ಳೆ ಮೂಡ್ನಲ್ಲಿ ಹೋಗುತ್ತಿದ್ದೇನೆ, ಇದಕ್ಕೆ ನೀನೇ ಕಾರಣ, ಥ್ಯಾಂಕ್ಯೂ, ಬೇಗ ಹೋಗಿ ತನ್ಮಯ್ ಸ್ಕೂಲ್ ಫೀಸ್ ಕಟ್ಟುತ್ತೇನೆ ಎಂದು ತಾಂಡವ್ ಮನೆಯಿಂದ ಹೊರಡುತ್ತಾನೆ.
ಮತ್ತೊಂದೆಡೆ ಪೂಜಾ ಹೊಸ ಕೆಲಸಕ್ಕೆ ಇಂಟರ್ವ್ಯೂಗೆ ಹೋಗುತ್ತಾಳೆ. ಆದರೆ ಇಂಟರ್ವ್ಯೂ ಮಾಡದೆ ಅವಳಿಗೆ ಜಿಮ್ನಲ್ಲಿ ರಿಸಪ್ಷನಿಸ್ಟ್ ಕೆಲಸ ಸಿಗುತ್ತದೆ, ಇಂದಿನಿಂದಲೇ ಕೆಲಸಕ್ಕೆ ಸೇರಲು ಬಾಸ್ ಹೇಳಿರುವುದಾಗಿ ಜಿಮ್ ಸಿಬ್ಬಂದಿ ಹೇಳುತ್ತಾರೆ. ನನ್ನನ್ನು ಇಂಟರ್ವ್ಯೂ ಮಾಡದೆ ಕೆಲಸಕ್ಕೆ ತೆಗೆದುಕೊಂಡಿದ್ದು ಯಾರಿರಬಹುದು ಎಂದು ಪೂಜಾಗೆ ಕುತೂಹಲ ಹೆಚ್ಚಾಗುತ್ತದೆ.
ಮಗನ ಸ್ಕೂಲ್ ಫೀಸ್ ಕಟ್ಟುವ ಚಾಲೆಂಜ್ನಲ್ಲಿ ಭಾಗ್ಯಾ ಸೋಲ್ತಾಳಾ? ಪೂಜಾಗೆ ಕೆಲಸ ಕೊಟ್ಟವರು ಯಾರು? ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.