ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 724ರ ಎಪಿಸೋಡ್ ಕಥೆ ಇಲ್ಲಿದೆ. ಪದೇ ಪದೆ ಭಾಗ್ಯಾಳನ್ನು ಕೆಣಕಿ ಅವಳಿಂದ ಏಟು ತಿಂದರೂ ಶ್ರೇಷ್ಠಾಗೆ ಸಮಾಧಾನವಾಗುವುದೇ ಇಲ್ಲ. ಮಾರುಕಟ್ಟೆಗೆ ತರಕಾರಿ ಖರೀದಿಸಲು ಬಂದ ಭಾಗ್ಯಾಳನ್ನು ಶ್ರೇಷ್ಠಾ ಮಾತನಾಡಿಸುತ್ತಾಳೆ. ಆದರೆ ಭಾಗ್ಯಾ ಮಾತ್ರ ಅವಳ ಕಡೆ ತಿರುಗಿ ನೋಡಲೂ ಇಷ್ಟಪಡುವುದಿಲ್ಲ. ಇಷ್ಟಾದರೂ ಶ್ರೇಷ್ಠಾ ಮಾತ್ರ ಅವಳನ್ನು ಹಿಂಬಾಲಿಸುತ್ತಲೇ ಬಂದು ಅಡ್ಡ ನಿಲ್ಲುತ್ತಾಳೆ. ನಿನಗೆ ಹಣ ಸಂಪಾದನೆ ಮಾಡುವ ದಾರಿಯನ್ನು ಹೇಳಿಕೊಡುತ್ತೇನೆ. ನಿನ್ನ ತಾಳಿಯನ್ನು ಮಾರಿಬಿಡು. ಗಂಡನೇ ನಿನ್ನ ಜೊತೆ ಇಲ್ಲವೆಂದ ಮೇಲೆ ತಾಳಿ ಏಕೆ ಎಂದು ತಾಳಿಗೆ ಕೈ ಹಾಕುತ್ತಾಳೆ.
ಶ್ರೇಷ್ಠಾ ಮೇಲೆ ಕೋಪಗೊಳ್ಳುವ ಭಾಗ್ಯಾ, ಆಕೆಯ ಕೆನ್ನೆಗೆ ಬಾರಿಸುತ್ತಾಳೆ. ಮಾರುಕಟ್ಟೆಯಲ್ಲಿ ತರಕಾರಿ ಮಾರುವವರು ಕೂಡಾ ಶ್ರೇಷ್ಠಾಳನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಶ್ರೇಷ್ಠಾ ಕೋಪದಿಂದಲೇ ಅಲ್ಲಿಂದ ಹೊರಡುತ್ತಾಳೆ. ಹೇಗಾದರೂ ಮಾಡಿ ಭಾಗ್ಯಾ ಕೊಬ್ಬು ಇಳಿಸಬೇಕು, ತಾಳಿ ತಾಳಿ ಎನ್ನುತ್ತಾಳೆ. ಆ ತಾಳಿಗೆ ಬೆಲೆ ಇಲ್ಲದಂತೆ ಮಾಡಬೇಕು ಎಂದುಕೊಳ್ಳುತ್ತಾಳೆ. ತನ್ನ ಸ್ನೇಹಿತ ಶೌರ್ಯನಿಗೆ ಕರೆ ಮಾಡಿ ಮದುವೆ ಅರೇಂಜ್ ಮಾಡುವಂತೆ ಹೇಳುತ್ತಾಳೆ. ನಿನಗೆ ಇಷ್ಟಬಂದಂತೆ ಮದುವೆ ಆಗಲು ಅದೇನು ಆಟ ಎಂದುಕೊಂಡಿದ್ದೀಯ ಎಂದು ಕೇಳುತ್ತಾನೆ. ಆದರೆ ಶ್ರೇಷ್ಠಾ ಮಾತ್ರ ಯಾರ ಮಾತನ್ನೂ ಕೇಳಲು ತಯಾರಿಲ್ಲ. ನೀನು ಎಲ್ಲಾ ಏರ್ಪಾಟು ಮಾಡಲೇಬೇಕು ಎಂದು ಕಂಡಿಷನ್ ಮಾಡಿ ಶಾಪಿಂಗ್ ಮಾಡಿಕೊಂಡು ಮನೆಗೆ ಬರುತ್ತಾಳೆ.
ಆಫೀಸಿಗೆ ಹೊರಟ ತಾಂಡವ್ನನ್ನು ತಡೆದು ಶ್ರೇಷ್ಠಾ, ಇಂದು ನೀನು ಆಫೀಸಿಗೆ ಹೋಗಬಾರದು ಈ ಪಂಚೆ ಶಲ್ಯ ಹಾಕಿಕೊಂಡು ರೆಡಿ ಆಗು ಎನ್ನುತ್ತಾಳೆ. ಅವಳು ಏಕೆ ಆ ರೀತಿ ವರ್ತಿಸುತ್ತಿದ್ದಾಳೆ ಎಂದು ತಿಳಿಯದೆ ತಾಂಡವ್, ನನಗೆ ಕೆಲಸ ಇದೆ ಆಫೀಸಿಗೆ ಹೋಗುತ್ತೇನೆ ಎನ್ನುತ್ತಾನೆ. ಸರಿ ಹೋಗು ನೀನು ಆಫೀಸಿನಿಂದ ಬರುವಷ್ಟರಲ್ಲಿ ನಾನು ಸಾಯುತ್ತೇನೆ ಎಂದು ಬ್ಲ್ಯಾಕ್ಮೇಲ್ ಮಾಡುತ್ತಾಳೆ. ಶ್ರೇಷ್ಠಾ ಬಲವಂತಕ್ಕೆ ತಾಂಡವ್ ಪಂಚೆ, ಶಲ್ಯ ಧರಿಸುತ್ತಾನೆ. ಕಾರಣ ಹೇಳದೆ ಶ್ರೇಷ್ಠಾ, ತಾಂಡವ್ನನ್ನು ಕರೆದುಕೊಂಡು ಕಾರಿನಲ್ಲಿ ಕೂರಿಸುತ್ತಾಳೆ. ಇವತ್ತು ಹಬ್ಬ ಏನಾದರೂ ಇದೆಯಾ? ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಈ ಡ್ರೆಸ್ ಏಕೆ ಹಾಕಿದ್ದೇವೆ ಎಂದು ತಾಂಡವ್ ಕೇಳುತ್ತಾನೆ. ಹೌದು ಇಂದು ನಮ್ಮ ಮದುವೆ, ಅದೇ ನಮಗೆ ಹಬ್ಬ ಎನ್ನುತ್ತಾಳೆ. ಅದನ್ನು ಕೇಳಿ ತಾಂಡವ್ ಶಾಕ್ ಆಗುತ್ತಾನೆ.
ದೇವಸ್ಥಾನವೊಂದರ ಮುಂದೆ ಶ್ರೇಷ್ಠಾ ಕಾರು ನಿಲ್ಲಿಸಿ ತಾಂಡವ್ನನ್ನು ಒಳಗೆ ಎಳೆದು ತರುತ್ತಾಳೆ. ಅವಳಿಂದ ಬಿಡಿಸಿಕೊಳ್ಳುವ ತಾಂಡವ್, ನಿನಗೇನಾದರೂ ಹುಚ್ಚು ಹಿಡಿದಿದ್ಯಾ, ನಾವು ಇದಕ್ಕೂ ಮುನ್ನ ಎಷ್ಟೋ ಬಾರಿ ಮದುವೆ ಆಗಲು ಹೊರಟಿದ್ದೆವು, ಆಗ ಯಾರಾದರೊಬ್ಬರು ಬಂದು ಮದುವೆ ನಿಲ್ಲಿಸುತ್ತಿದ್ದರು. ಈಗಲೂ ಖಂಡಿತ ಯಾರಾದರೂ ನಮ್ಮ ಮದುವೆ ನಿಲ್ಲಿಸುತ್ತಾರೆ. ನನಗೆ ದಯವಿಟ್ಟು ಸ್ವಲ್ಪ ಸಮಯ ಕೊಡು, ಈಗ ಮದುವೆ ಆಗುವುದು ನನಗೆ ಇಷ್ಟವಿಲ್ಲ ಎನ್ನುತ್ತಾನೆ. ಈ ಬಾರಿ ಆ ರೀತಿ ಖಂಡಿತ ಮದುವೆ ನಿಲ್ಲುವುದಿಲ್ಲ, ನಾವೂ ಮದುವೆ ಆಗೇ ತೀರುತ್ತೇವೆ ಎಂದು ಶ್ರೇಷ್ಠಾ ಹೇಳುತ್ತಾಳೆ. ತಾಂಡವ್ ಮನ ಒಲಿಸಲು ಮೊಸಳೆ ಕಣ್ಣೀರಿಡುತ್ತಾಳೆ. ಅವನ ಕಾಲಿಗೆ ಬಿದ್ದು ಮದುವೆ ಆಗುವಂತೆ ಮನವಿ ಮಾಡುತ್ತಾಳೆ. ಇಷ್ಟು ದಿನ ನಾನು ನಿನ್ನ ಪರ ನಿಂತಿದ್ದಕ್ಕೆ ನನ್ನ ಸಿಕ್ಕ ಪ್ರತಿಫಲ ಇದೇನಾ?
ನಿಮ್ಮ ತಂದೆ ತಾಯಿ ನಿನ್ನನ್ನು ನಿರಾಕರಿಸಿದಾಗ ನಿನ್ನ ಜೊತೆ ನಿಂತದ್ದು ನಾನು, ನೀನು ಮನೆ ಬಿಟ್ಟು ಬಂದಾಗ ನಿನ್ನ ಜೊತೆ ಇದ್ದದ್ದು ನಾನು, ನಿನಗೋಸ್ಕರ ನಾನು ಅಪ್ಪ ಅಮ್ಮನನ್ನು ದೂರ ಮಾಡಿಕೊಂಡೆ, ಅವರು ನಮಗೆ ಮಗಳೇ ಇಲ್ಲ ಎಂದು ಎಳ್ಳು ನೀರು ಬಿಟ್ಟರು. ನಿನ್ನ ಅಮ್ಮ, ಭಾಗ್ಯಾ ನನಗೆ ಹೊಡೆದಿದ್ದಾರೆ. ಬಾಯಿಗೆ ಬಂದಂತೆ ಬೈದಿದ್ದಾರೆ. ಎಲ್ಲವನ್ನೂ ಸಹಿಸಿಕೊಂಡಿದ್ದೇನೆ, ಎಷ್ಟು ದಿನ ಅಂತ ಎಲ್ಲರಿಂದ ಕೊಂಕು ಮಾತುಗಳನ್ನು ಕೇಳಬೇಕು ಎಂದು ಕೇಳುತ್ತಾಳೆ. ಶ್ರೇಷ್ಠಾ ನಾಟಕದ ಕಣ್ಣೀರಿಗೆ ಕರಗುವ ತಾಂಡವ್, ಅಳಬೇಡ ಶ್ರೇಷ್ಠಾ, ನೀನು ನನಗಾಗಿ ಎಷ್ಟು ತ್ಯಾಗ ಮಾಡಿದ್ದೀಯ ಅಂತ ನನಗೆ ಗೊತ್ತು. ನಿನ್ನಿಷ್ಟದಂತೆ ಇವತ್ತು ನಾವು ಮದುವೆ ಆಗೋಣ ಎನ್ನುತ್ತಾನೆ. ಅದನ್ನು ಕೇಳಿ ಶ್ರೇಷ್ಠಾ ಖುಷಿಯಾಗುತ್ತಾಳೆ.
ಅದೇ ದೇವಸ್ಥಾನಕ್ಕೆ ಸುಂದ್ರಿ, ಪ್ರಸಾದ ಪಡೆಯಲು ಬರುತ್ತಾಳೆ. ಒಂದು ಕಡೆ ಕೂತುಕೊಂಡು ನೆಮ್ಮದಿಯಾಗಿ ಪ್ರಸಾದ ತಿನ್ನೋಣ ಎಂದು ಸ್ಥಳ ಹುಡುಕಾಡುತ್ತಾಳೆ. ಅವಳ ಮುಂದೆ ತಾಂಡವ್ ಹಾಗೂ ಶ್ರೇಷ್ಠಾ ಹೋದರೂ ಸುಂದ್ರಿ, ಅವರಿಬ್ಬರನ್ನೂ ಗಮನಿಸುವುದಿಲ್ಲ. ತಾಂಡವ್-ಶ್ರೇಷ್ಠಾ ಮದುವೆ ನಡೆದೇಹೋಗುವುದಾ? ಅಥವಾ ಈ ಬಾರಿಯೂ ಮದುವೆ ನಿಲ್ಲುವುದಾ? ಸೋಮವಾರದ ಎಪಿಸೋಡ್ನಲ್ಲಿ ತಿಳಿಯಲಿದೆ.