ನಮ್ಮ ಸಂಸ್ಕೃತಿಯಲ್ಲಿ ನವಿಲುಗರಿಯನ್ನು ಶುಭವೆಂದು ಪರಿಗಣಿಸಲಾಗುತ್ತದೆ. ಅದರ ವರ್ಣರಂಜಿತ ಸೌಂದರ್ಯಕ್ಕೆ ಮಾರು ಹೋಗದವರೆ ಇಲ್ಲ. ಕೆಲವರ ಮನೆಯಲ್ಲಿ ಸುಂದರತೆಯ ಪ್ರತೀಕವಾಗಿ ಸ್ಥಾನ ಪಡೆದಿದ್ದರೆ, ಇನ್ನೂ ಕೆಲವರು ವಾಸ್ತುವಿನ ಹೆಸರಿನಲ್ಲಿ ಇರಿಸಿರುತ್ತಾರೆ. ಪುಟಾಣಿಗಳು ನವಿಲುಗರಿ ಮರಿ ಹಾಕುತ್ತದೆ ಎಂದು ಪುಸ್ತಕದ ಪುಟಗಳ ನಡುವೆ ಅಡಗಿಸಿಟ್ಟಿರುತ್ತಾರೆ. ಆದರೆ, ನಿಮಗೆ ಗೊತ್ತಾ…? ವೈದಿಕ ಶಾಸ್ತ್ರದ ಪ್ರಕಾರ ನವಿಲುಗರಿ ಸಿರಿ-ಸಂಪತ್ತು, ರಕ್ಷಣೆ ಹಾಗೂ ಸಕಾರಾತ್ಮಕ ಶಕ್ತಿಯ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತವೆ ಎಂದು. ಮಾಂತ್ರಿಕ ಶಕ್ತಿಯನ್ನು ಹೊಂದಿರುವುದರಿಂದಲೇ ಈ ನವಿಲು ಗರಿಗಳು ಶ್ರೀಕೃಷ್ಣ ಪರಮಾತ್ಮನ ಕಿರೀಟದಲ್ಲಿ ರಾರಾಜಿಸುತ್ತಿತ್ತು ಎಂದೂ ಸಹ ಹೇಳಲಾಗುತ್ತದೆ. ಇಷ್ಟೆಲ್ಲಾ ಸಕಾರಾತ್ಮ ಶಕ್ತಿಯನ್ನು ಹೊಂದಿರುವ ನವಿಲು ಗರಿಯನ್ನು ಹೇಗೆ ಹಾಗೂ ಏತಕ್ಕಾಗಿ ಬಳಸಬೇಕು ಎಂಬ ಮಾಹಿತಿ ಇಲ್ಲಿದೆ…. ಒಮ್ಮೆ ಓದಿ…..
ವಾಸ್ತು ದೋಷ ನಿವಾರಿಸುವ ನವಿಲು ಗರಿ:
ಸಕಾರಾತ್ಮಕ ಶಕ್ತಿಯನ್ನು ಹೊಂದಿರುವ ಗರಿಗಳು ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರಹಾಕುವ ಸಾಮರ್ಥ್ಯವನ್ನು ಹೊಂದಿವೆ. ಮನೆಯಲ್ಲಿ ಸಮತೋಲಿತ ಹಾಗೂ ಸಾಮರಸ್ಯದ ವಾತಾವರಣ ನಿರ್ಮಿಸುತ್ತವೆ. ಮನೆಯ ಆಗ್ನೇಯ ಮೂಲೆಯಲ್ಲಿ ನವಿಲುಗರಿಯನ್ನು ಇಡುವುದರಿಂದ ಅಗ್ನಿ ಶಕ್ತಿಯನ್ನು ಸಮತೋಲಿತಗೊಳಿಸುತ್ತದೆ. ಹಾಗೆಯೇ, ಈಶಾನ್ಯ ದಿಕ್ಕಿನಲ್ಲಿ ಇಡುವುದರಿಂದ ಆಧ್ಯಾತ್ಮಿಕತೆಯೆಡೆಗಿನ ಒಲವನ್ನು ಹೆಚ್ಚಿಸುತ್ತದೆ. ಇನ್ನು ಮನೆಯ ಮುಖ್ಯದ್ವಾರದ ಬಳಿ ನವಿಲು ಗರಿಯನ್ನು ಇಡುವುದರಿಂದ ದುಷ್ಟ ಶಕ್ತಿಗಳನ್ನು ದೂರವಿಡುವಲ್ಲಿ ಸಹಕಾರಿಯೆಂದು ಹೇಳಲಾಗುತ್ತದೆ. ವೈಜ್ಞಾನಿಕವಾಗಿ ಗರಿಗಳಲ್ಲಿ ಎದ್ದು ಕಾಣುವ ಬಣ್ಣಗಳು ಮನಸ್ಥಿತಿಯನ್ನು ಸುಧಾರಿಸಿ, ಉತ್ಸಾಹ ಹಾಗೂ ಸಂತೋಷದ ಭಾವನೆಗಳನ್ನು ತುಂಬುತ್ತವೆ.

ದುಷ್ಟ ಕಣ್ಣಿನಿಂದ ರಕ್ಷಣೆ:
ನವಿಲು ಗರಿಗಳು ದುಷ್ಟ ಕಣ್ಣಿನ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ನಂಬಲಾಗಿದೆ. ನವಿಲುಗರಿಯನ್ನು ಗಮನಿಸಿದಂತೆ ಅದರಲ್ಲಿರುವ ಕಣ್ಣಿನ ಮಾದರಿ ಎದುರಿಗಿರುವವರ ಅಸೂಯೆ ಹಾಗೂ ದುರುದ್ದೇಶಪೂರಿತ ಉದ್ದೇಶಗಳು ಫಲಕಾರಿಯಾಗದಂತೆ ತಡೆಯುತ್ತವೆ. ಇದರಿಂದಲೇ ಹಿಂದಿನ ಕಾಲದಲ್ಲಿ ಮಕ್ಕಳ ತೊಟ್ಟಿಲಿನಲ್ಲಿ ನವಿಲುಗರಿಯನ್ನು ಇಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಇದರ ಜೊತೆಗೆ, ಸಂಬಂಧಗಳನ್ನು ಸುಧಾರಿಸಲು, ಉದ್ಯೋಗದಲ್ಲಿ ಪ್ರಗತಿ ಕಾಣಲು ಉತ್ತೇಜಿಸುತ್ತವೆ.
ಸ್ಮರಣಾಶಕ್ತಿ, ಸೃಜನಶೀಲತೆಗೆ ಪೂರಕ:
ಜ್ಞಾನ ಹಾಗೂ ಬೌಧಿಕ ಬೆಳವಣಿಗೆಗೆ ನವಿಲುಗರಿಗಳು ಸಹಕಾರಿಯಾಗಿದ್ದು, ವೃತ್ತಿಪರರು, ಸಂಶೋಧನಕಾರರು ಹಾಗೂ ವಿದ್ಯಾರ್ಥಿಗಳು ತಮ್ಮ ಪುಸ್ತಕ ಅಥವಾ ಓದುವ ಸ್ಥಳದಲ್ಲಿನ ಮೇಜಿನ ಮೇಲೆ ನವಿಲುಗರಿಯನ್ನು ಇಟ್ಟುಕೊಳ್ಳಬಹುದು. ವಿಷಯದ ಗ್ರಹಿಕೆ ಹಾಗೂ ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ. ಸೃಜನಶೀಲತೆ ಹೆಚ್ಚಿಸಿ, ಸಮಸ್ಯೆ ಪರಿಹರಿಸುವ ಕೌಶಲ್ಯವನ್ನು ಬೆಳೆಸುತ್ತದೆ ಎಂದು ನಂಬಲಾಗಿದೆ. ಜ್ಞಾನದ ಸಕಾರ ಮೂರ್ತಿ ಎಂದು ಪರಿಗಣಿಸುವ ಶ್ರೀಕೃಷ್ಣನ ಮುಡಿಗೇರುವ ಮೂಲಕ ನವಿಲುಗರಿ ಈ ಪರಿಕಲ್ಪನೆಯನ್ನು ಬಲಗೊಳಿಸುತ್ತದೆ.

ಆಧ್ಯಾತ್ಮಿಕತೆಯೆಡೆಗೆ ಒಲವು:
ಪ್ರೀತಿ, ಜ್ಞಾನ ಹಾಗೂ ಆಧ್ಯಾತ್ಮಿಕತೆಯನ್ನು ಪ್ರತಿನಿಧಿಸುವ ಶ್ರೀಕೃಷ್ಣ ಪರಮಾತ್ಮನ್ನು ಆಧ್ಯಾತ್ಮಿಕ ಸಂಕೇತವಾಗಿರುವ, ಪೂಜಿಸಲ್ಪಡುವ ನವಿಲುಗರಿಯೊಟ್ಟಿಗೆ ಸಂಬಂಧ ಹೊಂದಿದ್ದಾನೆ. ಆದ್ದರಿಂದ ನವಿಲುಗರಿಯನ್ನು ಇಟ್ಟುಕೊಳ್ಳುವುದರಿಂದ ಅಂತಃಪ್ರಜ್ಞೆ ಜಾಗೃತಗೊಳ್ಳುತ್ತದೆ, ಆಧ್ಯಾತ್ಮಿಕತೆಯೆಡೆಗೆ ಒಲವು ಮೂಡುತ್ತದೆ. ಪೂಜಾ ಸ್ಥಳ ಅಥವಾ ಧ್ಯಾನಿಸುವ ಸ್ಥಳದಲ್ಲಿ ಇರಿಸುವುದರಿಂದ ಸಾತ್ವಿಕ ವಾತಾವರಣ ನಿರ್ಮಾಣಗೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಲಕ್ಕಿ ಚಾರ್ಮ್:
ಇವುಗಳು ಲಕ್ಕಿ ಚಾರ್ಮ್ ಆಗಿಯೂ ಶುಭ ತಂದು ಕೊಡುತ್ತದೆ. ಕೆಲಸ ಮಾಡುವ ಸ್ಥಳಗಳಲ್ಲಿ ಅಥವಾ ಪರ್ಸ್ನಲ್ಲಿ ಇದನ್ನು ಇಟ್ಟುಕೊಳ್ಳುವುದು ಶುಭ ಎಂದು ಪರಿಗಣಿಸಲಾಗಿದೆ. ಅಭಿವೃದ್ಧಿ ಹಾಗೂ ಸಾಧನೆಗೆ ಇದು ಪೂರಕವಾಗಿ ಕೆಲಸ ಮಾಡುತ್ತದೆ.
ಮಾನಸಿಕ ನೆಮ್ಮದಿ, ಭಾವನಾತ್ಮಕ ಸಮತೋಲನ:
ನವಿಲುಗರಿಗಳು ಶಾಂತ ಹಾಗೂ ಹಿತವಾದ ಪ್ರಭಾ ವಲಯವನ್ನು ಸೃಷ್ಟಿಸಿ, ಮಾನಸಿಕ ಶಾಂತಿ ಹಾಗೂ ಒತ್ತಡ ರಹಿತ ವಾತಾವರಣವನ್ನು ರೂಪಿಸುತ್ತವೆ. ಗರಿಗಳ ಮೇಲಿನ ಬಣ್ಣ ಮತ್ತು ವಿನ್ಯಾಸ, ಏಕಾಗ್ರತೆ ಹಾಗೂ ವಿಶ್ರಾಂತಿ ನೀಡುವ ಸಮ್ಮೋಹನ ವಿದ್ಯೆಯಂತೆ ಕೆಲಸ ಮಾಡುತ್ತವೆ ಎಂದು ಸಹ ಹೇಳಲಾಗುತ್ತದೆ.