ಅಪ್ಪು ಎಂದರೆ ಪುಟ್ಟ ಮಗೂ ಸಹ ಇಷ್ಟ ಪಡುವ, ಪ್ರೀತಿಸುವ, ಸದಾ ನೆನಪಿನಲ್ಲಿರುವ ಜೀವ. ಮನುಷ್ಯ ಜೀವನದಲ್ಲಿ ಹಣ ಸಂಪಾದಿಸುವುದು ಒಂದೆಡೆಯಾದರೆ, ಇನ್ನೊಂದು ಜೀವಕ್ಕೆ ಹೇಗೆ ಸಹಾಯಕವಾಗಬೇಕೆಂದು ಅಪ್ಪು ತನ್ನ ಅಭಿಮಾನಿಗಳಿಗೆ ಕಲಿಸಿಕೊಟ್ಟಿದ್ದಾರೆ. ಬಡ ಜೀವಕ್ಕೆ, ಹಸಿದ ಹೊಟ್ಟೆಗೆ, ಕಂಬನಿಗೆ ಮಿಡಿಯುತ್ತಿದ್ದ ಅಪ್ಪುವಿನ ಹೃದಯ ಅದೆಷ್ಟೋ ಒಳ್ಳೆ ಕೆಲಸಗಳನ್ನು ಮಾಡಿದೆ. ಅದೇ ರೀತಿ ಈಗ ಅಪ್ಪುವಿನ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ತನ್ನ ಪತಿ ಹೇಳಿಕೊಟ್ಟ ಮಾರ್ಗದಲ್ಲೇ ನಡೆಯುತ್ತಿದ್ದಾರೆ, ಅವರ ಕೆಲಸಗಳನ್ನು ಮುಂದುವರೆಸುತ್ತಾ, ದೊಡ್ಮನೆ ಹಿರಿಮೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅಷ್ಟೊಂದು ದೊಡ್ಡ ನಟನಾದರೂ ಚಿತ್ರರಂಗದಲ್ಲಿ ಬೆಳೆಯುವ ಪ್ರತಿಭೆಗಳಿಗೆ ಬೆಂಬಲ ನೀಡುತ್ತಿದ್ದರು. ಅವರು ಆರಂಭಿಸಿದ “ಪಿಆರ್ ಕೆ ಆಡಿಯೋ ” ಮತ್ತು “ಪಿಆರ್ ಕೆ ಪ್ರೊಡಕ್ಷನ್” ಅನ್ನು ಇದೀಗ ಅಶ್ವಿನಿ ಅವರು ಮುಂದುವರೆಸುತ್ತಾ ಹೋಗುತ್ತಿದ್ದಾರೆ. ಇವರೂ ಕೂಡಾ ಹೊಸ ತಂಡಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈಗಾಗಲೇ ಮಕ್ಕಳು ನಟಿಸಿರುವ “ದೇವರ ಕನಸು “ಎಂಬ ಸಿನಿಮಾದ ಟ್ರೈಲರ್ ಅನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.

ಈ ಸಿನಿಮಾದ ನಿರ್ದೇಶನವನ್ನು ಸುರೇಶ್ ಲಕ್ಕೂರ್ ಮಾಡಿದ್ದಾರೆ. ಕಮರ್ಷಿಯಲ್ ಸಿನಿಮಾಗಳೇ ಬರುತ್ತಿರುವ ಈ ಸಮಯದಲ್ಲಿ ಮಕ್ಕಳ ಸಿನಿಮಾಗಳು ಅತ್ಯಂತ ವಿರಳ. ಇದರ ಟ್ರೈಲರ್ ಅಶ್ವಿನಿ ಅವರು ಮಾಡಿದ ಕಾರಣ ಇದಕ್ಕೆ ನೂರು ಆನೆಗಳ ಬಲ ಬಂದಂತಾಗಿದೆ. ಮೂರು ಹಾಡುಗಳು ಈಗಾಗಲೇ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪ್ರದರ್ಶನವಾಗಿದೆ. ಚಿತ್ರವೀಗ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ನಿರ್ದೇಶಕ ಸುರೇಶ್ ಲಕ್ಕೂರ್ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ್ದಾರೆ. ಅವರ ಮೊದಲ ಚಿತ್ರವೇ ‘ದೇವರ ಕನಸು’. ಟ್ರೈಲರ್ ಮೂಲಕವೇ ಗಮನ ಸೆಳೆದ ಈ ಸಿನಿಮಾದ ಇನ್ನೇನು ಬಿಡುಗಡೆಗೊಳ್ಳುತ್ತದೆ.