ಬೆಂಗಳೂರಿನಲ್ಲಿ ಮಹಿಳೆಯರಿಗೆ ಒಂದೆಡೆ ಫ್ರೀ ಬಸ್ ಸಂಚಾರ ಜಾರಿಯಲ್ಲಿದೆ. ಆದರೆ, ಮತ್ತೊಂದೆಡೆ ಬಸ್ ಚಾರ್ಜ್ ಹೆಚ್ಚು ಮಾಡಿ ಪುರುಷ ಸವಾರರ ಮೂಗು ಕೆಂಪಾಗಿತ್ತು. ಅದರ ಜೊತೆಗೆ BMRCL ಸಹ ಮೆಟ್ರೋ ದರವನ್ನು ಹೆಚ್ಚು ಮಾಡಿ ಮೆಟ್ರೋ ಸವಾರರು ಕೈ-ಕೈ ಹಿಸುಕಿಕೊಳ್ಳುವಂತೆ ಮಾಡಿತ್ತು. ಬಸ್ ಹಾಗೂ ಮೆಟ್ರೋ ಸಂಚಾರ ದರ ಏರಿಸಿದ ಬೆನ್ನಲ್ಲೇ ಇದೀಗ ಮತ್ತೊಂದು ಸಾರ್ವಜನಿಕ ವಾಹನ ತನ್ನ ದರ ಏರಿಸಿಕೊಳ್ಳಲು ಸಜ್ಜಾಗಿ ನಿಂತಿದೆ. ಈ ಮೂಲಕ ಬೆಂಗಳೂರಿಗರು ಮನೆಯಿಂದ ಕಾಲು ಆಚೆ ಇಡುವ ಮುನ್ನ ಯಾವುದರಲ್ಲಿ ಹೋಗ ಬೇಕು ಎಂದು ಯೋಚಿಸುವಂತೆ ಮಾಡಿದೆ.
ಇತ್ತೀಚೆಗಷ್ಟೇ ಮೆಟ್ರೋ ದರ ಏರಿಕೆಯಾಗಿ ಬಹುಪಾಲು ಮೆಟ್ರೋ ಸವಾರರು ಬೇರೆ ಸಾರ್ವಜನಿಕ ವಾಹನದ ಮೊರೆ ಹೋಗಿದ್ದರು. ಆದರೀಗ ಮತ್ತೊಂದು ಏರಿಕೆ ಬಿಸಿ ಬೆಂಗಳೂರಿಗರನ್ನು ತಟ್ಟಲು ಸಜ್ಜಾಗಿದೆ. ಹೌದು, ಬಸ್ಸಾಯ್ತು, ಮೆಟ್ರೋ ಆಯ್ತು ಇದೀಗ ಆಟೋ ದರ ಏರಿಕೆಯಾಗಲಿದೆ ಎಂಬುದು ಬಹುತೇಕ ಖಚಿತವಾಗಿದೆ. ಮಾರ್ಚ್ನಲ್ಲಿ ದರ ಏರಿಕೆ ಕನ್ಫರ್ಮ್ ಎಂದು ಹೇಳಲಾಗುತ್ತಿದೆ.

ಮಾರ್ಚ್ ಎರಡನೇ ವಾರದಲ್ಲಿ ನೂತನ ಆಟೋ ಮೀಟರ್ ದರ ಜಾರಿಗೆ ಬರಲಿದೆ. ಈ ಹಿನ್ನೆಲೆಯಲ್ಲಿ ಮಾರ್ಚ್ 12ರಂದು ಇನ್ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಸಭೆ ನಡೆಯಲಿದ್ದು, ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ದರ ಪರಿಷ್ಕರಣೆ ಸಭೆ ನಡೆಯಲಿದೆ.
ಈಗಾಗಲೇ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಮೀಟರ್ ದರ ಹೆಚ್ಚಳ ಮಾಡುವಂತೆ ಒತ್ತಡ ಹೆಚ್ಚಾಗಿದೆ. ಕಳೆದ ವರ್ಷವೇ ಆಟೋ ಚಾಲಕ ಸಂಘಟನೆಗಳು ದರ ಏರಿಕೆ ಮಾಡುವಂತೆ ಮನವಿ ಮಾಡಿದ್ದವು. ಒಂದು ಕಿ.ಮೀಟರ್ಗೆ 5 ರೂಪಾಯಿ, ಎರಡು ಕೀ.ಮೀಟರ್ಗೆ 10 ರೂಪಾಯಿ ಏರಿಕೆ ಮಾಡುವಂತೆ ಕೋರಲಾಗಿತ್ತು.

ಪ್ರಸ್ತುತ ಬೆಂಗಳೂರಿನಲ್ಲಿ 1 ಕಿ.ಮೀಟರ್ಗೆ 30 ರೂಪಾಯಿ ದರ ಚಾಲ್ತಿಯಲ್ಲಿದ್ದು, ಇದೀಗ ಕನಿಷ್ಟ 40 ರೂಪಾಯಿಗೆ ಏರಿಕೆ ಮಾಡುವಂತೆ ಮನವಿ ಮಾಡಲಾಗಿದೆ. ಈ ಹಿಂದೆ ಅಂದರೆ 2021ರಲ್ಲಿ ಆಟೋ ಮೀಟರ್ ದರ ಹೆಚ್ಚಳ ಮಾಡಲಾಗಿತ್ತು. ಎಲ್ಪಿಜಿ ದರ ಕೆ.ಜಿ.ಗೆ 61 ರೂಪಾಯಿ ಆಗಿದ್ದಾರ ಪರಿಣಾಮವಾಗಿ ಆಟೋ ಮೀಟರ್ ಬೆಲೆ ಹೆಚ್ಚಳವಾಗಿತ್ತು. ಇದೀಗ ಆಟೋ ಸಿಎನ್ಜಿ ಅನಿಲ ದರವು ಒಂದು ಕೆ.ಜಿ.ಗೆ 88 ರೂಪಾಯಿಯಾಗಿದ್ದು, ಆಟೋ ಮೀಟರ್ ದರ ಹೆಚ್ಚಳ ಮಾಡಲೇ ಬೇಕು ಎಂದು ಆಟೋ ಚಾಲಕರು ಪಟ್ಟು ಹಿಡಿದಿದ್ದಾರೆ.

ಸಭೆಯಲ್ಲಿ ಯಾರೆಲ್ಲಾ ಭಾಗವಹಿಸಲಿದ್ದಾರೆ…?
ಟ್ರಾಫಿಕ್ ಈಸ್ಟ್ ಡಿಸಿಪಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯ ಅಧ್ಯಕ್ಷತೆಯನ್ನು ಇವರೇ ವಹಿಸಿಕೊಳ್ಳಲಿದ್ದಾರೆ. ಆಟೋ ರಿಕ್ಷಾ ರಹದ್ದಾರಿ ಕಚೇರಿ ಕಾರ್ಯದರ್ಶಿ(ಆರ್ಟಿಓ), ರಾಜಾಜಿನಗರ ಆರ್ಟಿಓ ಅಧಿಕಾರಿ, ಜಯನಗರ ಆರ್ಟಿಓ ಅಧಿಕಾರಿ, ಕಾನೂನು ಮಾಪನ ಇಲಾಖೆಯ ಓರ್ವ ಅಧಿಕಾರಿ, ಗ್ರಾಹಕರ ವೇದಿಕೆಯ ಪ್ರತಿನಿಧಿ, ಬೆಂಗಳೂರಿನ ಎಲ್ಲಾ ಆಟೋ ಸಂಘಟನೆಗಳ ಮುಖಂಡರುಗಳು ಈ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಒಟ್ಟಾರೆ, ಜನವರಿಯಲ್ಲಿ ರಾಜ್ಯ ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಿಲಾಗಿತ್ತು. ಇದರೊಟ್ಟಿಗೆ ಬಿಎಂಟಿಸಿ ಬಸ್ ದರವೂ ಏರಿಕೆಯಾಗಿತ್ತು. ಇದರ ಬೆನ್ನಲ್ಲೇ ಫೆಬ್ರವರಿಯಲ್ಲಿ ಬಿಎಂಆರ್ಸಿಎಲ್ ಮೆಟ್ರೋ ದರವನ್ನು ಹೆಚ್ಚಿಸಿತ್ತು. ಇದೀಗ ಮಾರ್ಚ್ನಲ್ಲಿ ಆಟೋ ಮೀಟರ್ ದರ ಏರಿಕೆಯಾಗಲಿದೆ. ಈ ಮೂಲಕ ಬೆಂಗಳೂರಿನ ಸಾರ್ವಜನಿಕ ಸಾರಿಗೆಗಳ ದರ ಹೊಸ ವರ್ಷದ ಬಂಪರ್ ಕೊಡುಗೆಯಾಗಿ ಏರಿಕೆ ಕಾಣುತ್ತಿದ್ದು, ಸಾಮಾನ್ಯರು ಕಣ್ಣು-ಬಾಯಿ ಬಿಡುವಂತಾಗಿದೆ.