ಹೃದಯಾಘಾತದಿಂದ ನಿಧನರಾಗುತ್ತಿರುವ ನಟ ನಟಿಯರ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮೊನ್ನೆಯಷ್ಟೇ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿದೇಶ ಪ್ರವಾಸದಲ್ಲಿದ್ದಾಗ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದೀಗ ಕನ್ನಡದ ಮತ್ತೋರ್ವ ಯುವ ಕಲಾವಿದ, ಕಿರುತೆರೆ ನಟ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಂಡ್ಯ ಮೂಲದ ಯುವ ಕಲಾವಿದ 24 ವರ್ಷದ ಪವನ್ ಸಾವನ್ನಪ್ಪಿದ ಯುವಕ. ಮುಂಬೈನಲ್ಲಿ ನೆಲೆಸಿದ್ದ ಈ ಕಿರುತೆರೆ ಕಲಾವಿದ, ಹಿಂದಿ, ತಮಿಳು ಧಾರಾವಾಹಿಗಳಲ್ಲಿ ನಟಿಸಿ ಸೈಎನಿಸಿಕೊಂಡಿದ್ದರು. ಚಿತ್ರಗಳಲ್ಲಿ ಅಭಿನಯಿಸುವ ಕನಸು ಕಂಡಿದ್ದ ಯುವನಟ, ಅದಕ್ಕಾಗಿ ತಮ್ಮನ್ನು ಸಾಕಷ್ಟು ತೊಡಗಿಸಿಕೊಂಡಿದ್ದರು. ಆದರೆ ಇದೀಗ ಪವತ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯವರಾದ ಪವನ್ ತಂದೆ ಹಾಗೂ ತಾಯಿಯೊಂದಿಗೆ ಮುಂಬೈನಲ್ಲೊ ನೆಲೆಸಿದ್ದರು.ಗುರುವಾರ ಮುಂಜಾನೆ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಹುಟ್ಟೂರಿನಲ್ಲಿ ಮೃತ ನಟನ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಪದೇ ಪದೇ ಹೃದಯಾಘಾತ ಕಲಾವಿದರನ್ನು ಕಾಡುತ್ತಿರುವುದು, ಜೀವ ಬಲಿ ಪಡೆಯುತ್ತಿರುವುದು ನೋವಿನ ಸಂಗತಿ.