ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳಲ್ಲ ಒಂದು ಅಮೆರಿಕಾ ಅಮೆರಿಕಾ. ಹಲವು ರೀತಿಯ ದಾಖಲೆಗಳನ್ನು ಬರೆದಂಥ ಸಿನಿಮಾ ಇದು. ನಾಗತಿಹಳ್ಳಿ ಚಂದ್ರಶೇಖರ್ ಅವರು ಒಬ್ಬ ಟೀಚರ್ ಆಗಿ, ಒಬ್ಬ ಕಥೆಗಾರರಾಗಿ ಹೆಸರು ಮಾಡಿದ್ದವರು, ನಂತರ ನಿರ್ದೇಶಕರಾದರು. ಎಂಥೆಂಥ ಒಳ್ಳೆಯ ಸಿನಿಮಾಗಳನ್ನು ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಕೊಟ್ರೆಶಿ ಕನಸು, ಬಾ ನಲ್ಲೆ ಮಧುಚಂದ್ರಕೆ, ಹೂಮಳೆ ಇಂಥ ಒಳ್ಳೆಯ ಸಿನಿಮಾಗಳನ್ನು ಮಾಡಿದ್ದಾರೆ. ಈ ಸಾಲಿಗೆ ಸೇರಿದಂಥ ಸೂಪರ್ ಹಿಟ್ ಸಿನಿಮಾಗಳಿಗೆ ಅಮೆರಿಕಾ ಅಮೆರಿಕಾ ಕೂಡ ಸೇರುತ್ತದೆ. ಈ ಸಿನಿಮಾ ಹಲವು ರೀತಿಯಲ್ಲಿ ಪ್ರಯೋಗ ಮಾಡಿದ್ದು ಎಂದು ಹೇಳಿದರು ಸಹ ನಿಜವೇ.. ಕನ್ನಡಿಗರು ಇವತ್ತಿಗೂ ಮರೆಯಾದ ಸಿನಿಮಾಗಳಲ್ಲಿ ಒಂದು..

ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೆರಿಕಾ ಅಮೆರಿಕಾ ಸಿನಿಮಾದಲ್ಲಿ ರಮೇಶ್ ಅವರು, ಹೇಮಾ ಪಂಚಮುಖಿ ಅವರು, ಆನಂದ್ ಅವರು ನಟಿಸಿದ್ದರು. ಈ ಸಿನಿಮಾ ಮೂಲಕ ಥಿಯೇಟರ್ ಒಳಗೆ ಕೂತು, ಅಮೆರಿಕಾ ಅಂಥ ದೊಡ್ಡ ದೇಶವನ್ನು ನಾವೆಲ್ಲರು ಕೂಡ ನೋಡುವ ಆವಕಾಶ ಸಿಕ್ಕಿತ್ತು. ಹಾಗೆಯೇ ಅಮೆರಿಕಾದಲ್ಲಿ ಬಿಡುಗಡೆಯಾದ ಮೊಟ್ಟ ಮೊದಲ ಕನ್ನಡ ಸಿನಿಮಾ ಇದು. ಹಾಗೆಯೇ ಚಿತ್ರಮಂದಿರಗಳಲ್ಲಿ ಸುಮಾರು ಒಂದು ವರ್ಷಗಳ ಕಾಲ ಪ್ರದರ್ಶನ ಕಂಡ ಸಿನಿಮಾ ಇದು. ಈ ಸಿನಿಮಾದ ಹಾಡುಗಳು ಸಹ ಜನರಿಗೆ ಅಷ್ಟೇ ಫೇವರೆಟ್ ಆಗಿತ್ತು. ನೂರು ಜನ್ಮಕು, ಯಾವ ಮೋಹನ ಮುರಳಿ ಕರೆಯಿತು, ಹೇಗಿದೆ ನಮ್ ದೇಶ ಹೇಗಿದೆ ನಮ್ ಭಾಷೆ ಹಾಡು ಇದೆಲ್ಲವನ್ನು ಮರೆಯಲು ಸಾಧ್ಯವಿಲ್ಲ.
ಈಗಿನ ಚಿತ್ರಗಳು ಒಂದು ಅಥವಾ ಎರಡು ವಾರಗಳ ಕಾಲ ಪ್ರದರ್ಶನ ಕಾಣುವುದು ಸಹ ಕಷ್ಟವೇ, ಆದರೆ ಆಗಿನ ಕಾಲದಲ್ಲಿ ಅಷ್ಟು ಚೆನ್ನಾಗಿ ಒಳ್ಳೆಯ ಸಿನಿಮಾಗಳು ತೆರೆಕಂಡು, ಪ್ರದರ್ಶನ ಕಾಣುತ್ತಿದ್ದವು. ಇನ್ನು ಈ ಸಿನಿಮಾ ಈಗ 28 ವರ್ಷಗಳು ತುಂಬಿದೆ. ಒಂದು ಸಿನಿಮಾ ಇಷ್ಟು ವರ್ಷಗಳ ಕಾಲ ಆದಮೇಲು ಜನರು ನೆನಪಿನಲ್ಲಿ ಇಟ್ಟುಕೊಳ್ಳುವುದು ಎಂದರೆ ಅದು ಸಾಮಾನ್ಯ ವಿಷಯ ಅಂತು ಅಲ್ಲ. ಆಗಿನ ಜೆನೆರೇಷನ್ ನವರು ಮತ್ತು ಈಗಿನ ಜೆನೆರೇಷನ್ ಅವರು ಎಲ್ಲರೂ ಇಷ್ಟಪಡುವ ಸಿನಿಮಾ. ಈ ಸಿನಿಮಾದ ಮತ್ತೊಂದು ವಿಶೇಷತೆ ಅಣ್ಣಾವ್ರು ಸಿನಿಮಾದ ಆಡಿಯೋ ಬಿಡುಗಡೆ ಮಾಡಿದ್ದು, ಅದು ಅವರ ಮನೆಯಲ್ಲೇ. ಈ ಘಟನೆ ಬಗ್ಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಿಳಿಸಿದ್ದಾರೆ..

“ಇದು ಶುಭದಿನ. ನನ್ನ ಪಾಲಿಗೆ ಧನ್ಯತೆ, ಸಾರ್ಥಕತೆ ಮತ್ತು ಕೃತಜ್ಞತೆಗಳ ಸಂತೃಪ್ತಿಯ ದಿನ.11 ಏಪ್ರಿಲ್ 1997ರ ಮುಂಜಾನೆ ಭಯ, ಹಿಂಜರಿಕೆಗಳಿಂದ ಕನ್ನಡಿಗರೆದುರು ಮಂಡಿಸಿದ ಈ ನನ್ನ ದೃಶ್ಯಕಾವ್ಯವನ್ನು ಮಹಾಜನತೆ ಕಣ್ಣಿಗೊತ್ತಿಕೊಂಡು ಆನಂದಿಸಿದರು. ಸತತ ಒಂದು ವರ್ಷ ದಿನವಹಿ ನಾಲ್ಕು ಪ್ರದರ್ಶನಗಳು. ವಿಶ್ವಾದ್ಯಂತ ಮೊದಲ ಅದ್ದೂರಿ ಪ್ರದರ್ಶನ ಕಂಡ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆ; ಬಹುಭಾಷಾ ಅವತರಣಿಕೆಗಳು; ರಾಜ್ಯ, ರಾಷ್ಟ್ರಪ್ರಶಸ್ತಿಗಳ ಗೌರವ. ಗೆಳೆಯ ರಮೇಶ್ ಅರವಿಂದ್ ಹೇಳುವಂತೆ ಇದು ಕೇಳಿದ್ದೆಲ್ಲ ಕೊಟ್ಟ ಕಲ್ಪವೃಕ್ಷ- ಕಾಮಧೇನು! ಅಣ್ಣಾವ್ರು ತಮ್ಮ ಮನೆಯಲ್ಲೇ ಆಡಿಯೋ ಬಿಡುಗಡೆ ಮಾಡಿದ್ದು; ಅವರು ದಾದಾ ಫಾಲ್ಕೆ ಪ್ರಶಸ್ತಿ ಪಡೆದ ವೇದಿಕೆಯಲ್ಲಿ ನಾನೂ ಪ್ರಶಸ್ತಿ ಪಡೆದಿದ್ದು; ಪೂರ್ಣಚಂದ್ರ ತೇಜಸ್ವಿಯವರು ಪ್ರಶಸ್ತಿ ಪಡೆದ ವೇದಿಕೆಯಲ್ಲಿ ನಾನೂ ಈ ಕೃತಿಗೆ ಮಂಗಳೂರಿನ ಮಹತ್ವದ ‘ಸಂದೇಶ’ ಪ್ರಶಸ್ತಿ ಪಡೆದದ್ದು, ಅಸಂಖ್ಯ ಪ್ರಶಸ್ತಿಗಳು.
ನೂರಾರು ಹೆತ್ತವರು ತಮ್ಮ ಹೆಣ್ಣುಮಗುವಿಗೆ ‘ಭೂಮಿಕಾ’ ಎಂದು ಹೆಸರಿಟ್ಟದ್ದು; ಚಿತ್ರೀಕರಿಸಿದ ಹಲವು ತಾಣಗಳು ಪ್ರವಾಸೀ ತಾಣಗಳಂತಾದದ್ದು…ಸವಿ ನೆನಪುಗಳ ಶಾಶ್ವತ ಸರಮಾಲೆ.
…..ಹಿಡಿಯಷ್ಷು ವಿಷಾದಗಳೂ ಇವೆ. ಅಣ್ಣಾವ್ರು ನಿರ್ಗಮಿಸಿದರು. ಜತೆಗೆ ಚಿತ್ರದಲ್ಲಿ ಅಭಿನಯಿಸಿದ್ದ ವೈಶಾಲಿ ಕಾಸರವಳ್ಳಿ, ಸಿ.ಆರ್. ಸಿಂಹ, ಕಲಾನಿರ್ದೇಶಕ ಭದ್ರಾವತಿ ರಾಜು, ಗಾಯಕ ರಾಜು ಅನಂತಸ್ವಾಮಿ, ಅಮೆರಿಕೆಯಲ್ಲಿ ಹಲವು ಬಗೆಯಲ್ಲಿ ನೆರವಾಗಿದ್ದ ಹರಿಹರೇಶ್ವರ, ನಾಗಲಕ್ಷ್ಮಿ ಹರಿಹರೇಶ್ವರ, ರವೀಂದ್ರನಾಥ್ ಸಹ ನಿರ್ಗಮಿಸಿದರು. ಆಗೆಲ್ಲ ಏಕಪರದೆಗಳ ಸುಂದರಿಯರದೇ ಸಾಮ್ರಾಜ್ಯ.ಸಾವಿರ ಪ್ರದರ್ಶನ ನೀಡಿದ್ದ ಮೈಸೂರಿನ ಶಾಂತಲೆ ತೀರಿಕೊಂಡಳು. ಮಂಡ್ಯದ ಮತ್ತು ಬೆಂಗಳೂರಿನ ಶಾಂತಿ,ನಂದಾಗಳು ಇಲ್ಲವಾದರು. ಚಾಮರಾಜಪೇಟೆಯ ಉಮಾ ಹಾಸಿಗೆ ಹಿಡಿದು ಮಲಗಿ ಬಹುಕಾಲವಾಯಿತು.
ಕೊಟ್ರೇಶಿಯಂಥ ಕಲಾತ್ಮಕ ಚಿತ್ರ ನಿರ್ಮಿಸಿದ್ದ ಜಿ. ನಂದಕುಮಾರ್ ಈ ನನ್ನ ಹುಚ್ಚು ಸಾಹಸಕ್ಕೆ ಹಣ ಹೂಡಿದ್ದರು.ಅವರನ್ನು ಮತ್ತು ನನ್ನ ಎಲ್ಲ ಕಲಾವಿದ ತಂತ್ರಜ್ಞರನ್ನೂ ರಾಜಶ್ರೀ ಪಿಕ್ಚರ್ಸ್ ಸಂಸ್ಥೆಯನ್ನೂ ಮಾಧ್ಯಮ ಬಂಧುಗಳನ್ನೂ ಮುಖ್ಯವಾಗಿ ನೋಡಿದ ಈಗಲೂ ನೋಡುತ್ತಿರುವ ಮೆಚ್ಚುತ್ತಿರುವ ನಿಮ್ಮನ್ನು ಪ್ರೀತಿಯಿಂದ ನೆನೆಯುತ್ತಿದ್ದೇನೆ. ಆಗ ನನಗೆ ಮುವ್ವತ್ತೊಂಬತ್ತು. ಈಗ ಅರವತ್ತೇಳು. ಕಾಲ ಬದಲಾಗಿದೆ.ಮತ್ತೊಂದು ಕಾವ್ಯವನ್ನು ಸೃಷ್ಟಿಸಲು ಹೊರಟಿದ್ದೇನೆ. ಜತೆಗೆ ನೀವಿದ್ದೀರಿ ಎಂಬ ನಂಬುಗೆ..”ಎಂದು ನಾಗತಿಹಳ್ಳಿ ಚಂದ್ರಶೇಖರ್ ಅವರು ಬರೆದುಕೊಂಡಿದ್ದಾರೆ. ಆ ಹಳೆಯ ನೆನಪುಗಳೇ ಎಷ್ಟು ಸುಂದರ ಅಲ್ವಾ.. ಈ ವಿಚಾರಗಳನ್ನು ನಾಗತಿಹಳ್ಳಿ ಚಂದ್ರಶೇಖರ್ ಅವರು ಬಹಳ ಪ್ರೀತಿಯಿಂದ ಬರೆದುಕೊಂಡಿದ್ದಾರೆ..