ಸಾಮಾಜಿಕ ಜಾಲತಾಣ ಎಷ್ಟರ ಮಟ್ಟಿಗೆ ಜನ ಜೀವನದ ಮೇಲೆ ಪ್ರಭಾವ ಬೀರಿದೆ ಎಂಬುದಕ್ಕೆ ಸಾಕ್ಷಿ ಈ ಹಳ್ಳಿ. ಯೂಟ್ಯೂಬ್ ಚಾನೆಲ್ಗಳಿಗೇನು ಬರವಿಲ್ಲ. ಸುಲಭವಾಗಿ ತೆರೆಯಬಹುದಾದ ಯೂಟ್ಯೂಬ್ ಚಾನೆಲ್ನಿಂದ ಲಕ್ಷಾಂತರ ಮಂದಿ ಕೈ ತುಂಬ ಹಣ ಸಂಪಾದಿಸುತ್ತಿದ್ದಾರೆ. ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೋ ಅಪ್ಲೋಡ್ ಮಾಡಿಯೇ ಪ್ರಸಿದ್ಧಿ ಹೊಂದಿರುವವರಿಗೂ ಕಡಿಮೆ ಇಲ್ಲ. ಇಲ್ಲೊಂದು ಹಳ್ಳಿ ಯೂಟ್ಯೂಬ್ ಚಾನೆಲ್ನಿಂದಲೇ ಹೆಸರುವಾಸಿಯಾಗಿದ್ದು, ಭಾರತದ ಯೂಟ್ಯೂಬ್ ರಾಜಧಾನಿ ಎಂಬ ಬಿರುದನ್ನು ಮುಡಿಗೇರಿಸಿಕೊಂಡಿದೆ. ಯಾವುದಪ್ಪ ಆ ಹಳ್ಳಿ? ಅದ್ಹೇಗೆ ಯೂಟ್ಯೂಬ್ ರಾಜಧಾನಿ ಎಂಬ ಗೌರವಕ್ಕೆ ಪಾತ್ರವಾಗಿದೆ ಎಂದು ಯೋಚಿಸುತ್ತದ್ದರೆ…ನಿಮ್ಮೆಲ್ಲಾ ಪ್ರಶ್ನೆಗೂ ಇಲ್ಲಿದೆ ಉತ್ತರ.
ಯೂಟ್ಯೂಬ್ ರಾಜಧಾನಿ ತುಳಸಿ ಗ್ರಾಮ
ಛತ್ತೀಸ್ಗಢದ ರಾಯಪುರದ ಒಂದು ಪುಟ್ಟ ಹಳ್ಳಿ. ಸರಿಸುಮಾರು ೪ ಸಾವಿರ ಜನರು ವಾಸವಿರುವ ಈ ಹಳ್ಳಿಯಲ್ಲಿ ಯೂಟ್ಯೂಬರ್ಗಳ ಹಾವಳಿಗೇನು ಕಡಿಮೆಯಿಲ್ಲ. ಯೂಟ್ಯೂಬರ್ಗಳಿಂದಲೇ ತುಂಬಿರುವ ಈ ಹಳ್ಳಿಯನ್ನು ಯೂಟ್ಯೂಬ್ ಗ್ರಾಮವೆಂದು ಸಹ ಕರೆಯಲಾಗುತ್ತದೆ. ಯೂಟ್ಯೂಬ್ ಕೇವಲ ಮೋಜು ಮಸ್ತಿಗೆ ಸೀಮಿತವಾಗಿದೆ ಎಂದು ಮೂಗುಮುರಿಯುವವರಿಗೆ ಉತ್ತರವಾಗಿ, ಇಲ್ಲಿನ ಮಂದಿ ಯೂಟ್ಯೂಬ್ ಚಾನೆಲನ್ನೇ ಆದಾಯದ ಮೂಲವಾಗಿಸಿಕೊಂಡಿದ್ದಾರೆ. ಇದರಿಂದ ಸ್ಥಳೀಯ ಆರ್ಥಿಕತೆ ಹಾಗೂ ಸಾಮಾಜಿಕ ಚಲನಶೀಲತೆಯ ಮೇಲೆ ಗಮನಾರ್ಹ ಪ್ರಭಾವ ಬೀರಿದೆ ಎಂದು ತಿಳಿದು ಬಂದಿದೆ.
ಈ ಗ್ರಾಮದ ನಿವಾಸಿಗಳು ಯೂಟ್ಯೂಬ್ನಲ್ಲಿ ಕಂಟೆ 0ಟ್ಗಳನ್ನು ಸೃಷ್ಟಿಸಿ, ಅಪ್ಲೋಡ್ ಮಾಡುವುದರ ಜೊತೆಗೆ ಯೂಟ್ಯೂಬ್ಗೆ ಸಂಬಂಧಿತ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಆದಾಯದ ಖಾತೆಯನ್ನು ತೆರೆದುಕೊಂಡಿದ್ದಾರೆ. ಇದರ ಕುರಿತು ಬಿಬಿಸಿ ವರ್ಲ್ಡ್ಸ್ ನಲ್ಲಿ ಇತ್ತೀಚೆಗೆ ವರದಿ ಬಿತ್ತರಗೊಂಡಿದ್ದು, ಯೂಟ್ಯೂಬ್ ಹೇಗೆ ಸಮಾಜದಲ್ಲಿ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತಲಿದೆ ಎಂಬುದನ್ನು ತಿಳಿಸಿಕೊಟ್ಟಿದೆ.

ಗ್ರಾಮಸ್ಥರ ದಿನನಿತ್ಯದ ಭಾಗವಾಗಿರುವ ಯೂಟ್ಯೂಬ್
ವಯಸ್ಸಿನ ಭೇದವಿಲ್ಲದೆ ಮಹಿಳಾ ಹಾಗೂ ಪುರಷ ಆಸಕ್ತಿದಾಯಕರು ಪ್ರತಿದಿನದ ತಮ್ಮ ಕೆಲಸ-ಕಾರ್ಯಗಳನ್ನು ವೀಡಿಯೋ ಮಾಡಿ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ. ಅದರಲ್ಲಿಯೂ ಕೆಲವರು ಯೂಟ್ಯೂಬ್ ಮೂಲಕ ಜನರನ್ನು ಮನರಂಜಿಸುವ ನಿಟ್ಟಿನಲ್ಲಿ ಹೊಸ ವಿಷಯವನ್ನು ಸೃಷ್ಠಿಸಿ ಅಪ್ಲೋಡ್ ಮಾಡುವುದರಲ್ಲಿ ತೊಡಗಿಕೊಂಡಿದ್ದಾರೆ. ಕೆಲವು ಸ್ಥಳೀಯ ನಿವಾಸಿಗಳು ತಮ್ಮದೇ ಪ್ರೊಡಕ್ಷನ್ ಸೆಟ್ ಸ್ಥಾಪಿಸಿಕೊಂಡಿದ್ದರೆ, ಮತ್ತೂ ಹಲವರು ಮೊಬೈಲ್ ಹಾಗೂ ಟ್ರೈಪೋಡ್ ಬಳಸಿ ವೀಡಿಯೋಗಳನ್ನು ಚಿತ್ರಿಸುತ್ತಾರೆ. ಇನ್ನು ಹಳ್ಳಿಯಲ್ಲಿನ ಪ್ರತಿಯೊಂದು ಸ್ಥಳವು ಕಾರ್ಯಕ್ರಮಗಳಿಗೆ ಹಿನ್ನೆಲೆ ದೃಶ್ಯವಾಗಿ ಬಳಕೆಯಾಗುವುದರಿಂದಲೇ ಈ ಗ್ರಾಮ ಯೂಟ್ಯೂಬ್ ಗ್ರಾಮ ಎಂದು ಗುರುತಿಸಿಕೊಳ್ಳಲು ಮುಖ್ಯ ಕಾರಣವಾಗಿದೆ.
ಸ್ಥಳೀಯ ಆರ್ಥಿಕತೆ ಮೇಲೆ ಗಮನಾರ್ಹ ಪ್ರಭಾವ
ಸಕ್ಕರೆಯಿದ್ದ ಕಡೆ ಇರುವೆ ಮುತ್ತುವುದು ಸಹಜ ಎಂಬಂತೆ ಆದಾಯ ಲಭಿಸುವ ಕಡೆ ಜನರ ಒಲವು ಮೂಡುವುದೂ ಸಹಜವೇ. ಅದರಂತೆ ಯೂಟ್ಯೂಬ್ ಚಾನೆಲ್ನಲ್ಲಿ ವೀಡಿಯೋಗಳನ್ನು ಅಪ್ಲೋಡ್ ಮಾಡಿ ಸಾಕಷ್ಟು ಸಂಖ್ಯೆಯಲ್ಲಿ ವ್ಯೂಸ್, ಲೈಕ್ಸ್ ಹಾಗೂ ಶೇರ್ ಗಳನ್ನು ಪಡೆದು ಹಣ ಸಂಪಾದಿಸುವ ಮಾರ್ಗವನ್ನು ಈ ಊರಿನ ಜನ ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ ಎಂಬುದಕ್ಕೆ ಈ ವರದಿಯೇ ಸಾಕ್ಷಿ. ಬಿಬಿಸಿ ವರದಿಯಲ್ಲಿ ಉಲ್ಲೇಖವಾಗಿರುವಂತೆ ಸ್ಥಳೀಯ ಆರ್ಥಿಕತೆಯಲ್ಲಿ ಏರಿಕೆ ಕಾಣುವಲ್ಲಿ ಗ್ರಾಮಸ್ಥರ ಆದಾಯದ ಪಾಲಿದೆ. ಇದರಿಂದಾಗಿ ಅಲ್ಲಿನ ಆರ್ಥಿಕತೆ ಗಣನೀಯವಾಗಿ ಏರಿಕೆ ಕಂಡಿದ್ದು, ಆರ್ಥಿಕ ಲಾಭದ ಹೊರತಾಗಿ ಸಾಮಾಜಿಕ ಸಮಾನತೆ ಹಾಗೂ ಬದಲಾವಣೆಗೆ ದಾರಿ ಮಾಡಿಕೊಟ್ಟಿದೆ.
ಯೂಟ್ಯೂಬ್ ಕ್ರಾಂತಿ ಇವರಿಂದ ಪ್ರಾರಂಭ
೨೦೧೮ರಲ್ಲಿ ಜೈ ವರ್ಮಾ ಹಾಗೂ ಅವರ ಸ್ನೇಹಿತ ಜ್ಞಾನೇಂದ್ರ ಶುಕ್ಲಾ “ಬೀಯಿಂಗ್ ಛತ್ತೀಸ್ಗಢ್” ಎಂಬ ಯೂಟ್ಯೂಬ್ ಚಾನೆಲನ್ನು ಪ್ರಾರಂಭಿಸಿದರು. ಅವರಿಂದ ಪ್ರಾರಂಭವಾದ ಯೂಟ್ಯೂಬ್ ಚಾನೆಲ್ ಈಗ ಯೂಟ್ಯೂಬ್ ಕ್ರಾಂತಿಯಾಗಿ ಮಾರ್ಪಟ್ಟು, ಹಳ್ಳಿಯ ಮನೆಮಾತಾಗಿದೆ. ತಮ್ಮ ಯೂಟ್ಯೂಬ್ ಚಾನೆಲ್ ಪ್ರಾರಂಭದ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಜೈ ವರ್ಮಾ “ನಾವು ನಮ್ಮ ದಿನನಿತ್ಯದ ಜೀವನ ಶೈಲಿಯಿಂದ ತೃಪ್ತರಾಗಿರಲಿಲ್ಲ. ನಮ್ಮಲ್ಲಿನ ಕ್ರಿಯಾತ್ಮಕತೆ ಹೊರ ಬರುವಂತೆ ಏನನ್ನಾದರು ಮಾಡಲೇಬೇಕು ಎಂಬುದು ನಮ್ಮ ಆಸೆಯಾಗಿತ್ತು” ಎಂದು ಹೇಳಿಕೊಂಡಿದ್ದಾರೆ. ಪ್ರಾರಂಭದಲ್ಲಿ ಬೇರೆ ಕೆಲಸದ ಜೊತೆಗೆ ಯೂಟ್ಯೂಬ್ ಚಾನೆಲನ್ನು ನಡೆಸಿಕೊಂಡು ಹೋಗುತ್ತಿದ್ದ ಇವರು, ನಂತರ ಯೂಟ್ಯೂಬ್ನನ್ನೇ ವೃತ್ತಿಜೀವನವನ್ನಾಗಿ ಮಾಡಿಕೊಂಡು ಇಂದು ಮಿಲಿಯನ್ ಲೆಕ್ಕದಲ್ಲಿ ಸಬ್ಸ್ಕ್ರೈಬರ್ ಗಳನ್ನು
ಹೊಂದಿದ್ದಾರೆ. ಹಾಸ್ಯದ ಮೂಲಕ ಸಾಮಾಜಿಕ ಕಳಕಳಿಯನ್ನು ಜನರಿಗೆ ಮುಟ್ಟಿಸುವ ಇವರ ಪ್ರಯತ್ನಕ್ಕೆ ಜಯಸಿಕ್ಕಿದ್ದು, ಇವರ ಈ ಹಾದಿಯೇ ತುಳಸಿ ಗ್ರಾಮದ ಇತರರಿಗೆ ಸ್ಫೂರ್ತಿಯಾಗಿದೆ.
ಮಹಿಳೆಯರನ್ನು ಮುಖ್ಯಭೂಮಿಕೆಗೆ ಕರೆತಂದ ಯೂಟ್ಯೂಬ್
ಕೇವಲ ಪುರುಷರು ಮಾತ್ರವಲ್ಲ ತುಳಸಿ ಗ್ರಾಮದ ಮಹಿಳೆಯರು ಸಹ ತಮ್ಮನ್ನು ಯೂಟ್ಯೂಬ್ ಚಾನೆಲ್ ಕೆಲಸ-ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದರಿಂದ ಹಳ್ಳಿಯಲ್ಲಿ ಮಹಿಳೆಯರನ್ನು ನೋಡುವ ಪರಿ ಬದಲಾಗಿದೆ. ಸಮಾನತೆ ಹಾಗೂ ಗೌರವಯುತವಾಗಿ ಅವರನ್ನು ನಡೆಸಿಕೊಳ್ಳಲಾಗುತ್ತಿದ್ದು, ಅವರು ಆರ್ಥಿಕವಾಗಿ ಸದೃಢರಾಗಿಯೂ
ರೂಪುಗೊಳ್ಳುತ್ತಿದ್ದಾರೆ.
ಒಟ್ಟಾರೆ, ಯೂಟ್ಯೂಬ್ ಸಮಯಹರಣಕ್ಕೆ ಇರುವ ಸುಲಭ ಮಾರ್ಗ ಎಂದು ಬೊಬ್ಬೆ ಹೊಡೆಯುವವರಿಗೆ… ಇಲ್ಲ, ಯೂಟ್ಯೂಬ್ ಸಹ ಆದಾಯದ ಮೂಲ ಎಂಬುದನ್ನು ಗಟ್ಟಿಯಾಗಿ ಸಾರಿ ಹೇಳಲು ಯೂಟ್ಯೂಬ್ ರಾಜಧಾನಿ ತುಳಸಿ ಗ್ರಾಮ ಸಿದ್ಧವಾಗಿದೆ. ತಂತ್ರಜ್ಞಾನದ ಬಳಕೆಯ ಹಿಂದೆ ಲಾಭ-ನಷ್ಟ ಎಂಬ ಎರಡು ಹಾದಿಗಳಿದ್ದು, ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಬಳಕೆದಾರರ ಕೈಯಲ್ಲಿರುತ್ತದೆ.