ಪ್ರೀತಿ, ಪ್ರೇಮದಲ್ಲಿ ಕೋಪ, ಮುನಿಸು, ಗಲಾಟೆ ಎಲ್ಲವೂ ಸಾಮಾನ್ಯ ಕೆಲವೊಂದು ಮನಸ್ತಾಪ ಒಂದೆರಡು ದಿನ ಬಾಳಿಕೆ ಬರಬಹುದು ಅಷ್ಟೇ. ಆದರೆ ಇಲ್ಲೊಬ್ಬ ಯುವತಿ ಪ್ರಿಯಕರನೊಂದಿಗೆ ಮುನಿಸಿಕೊಂಡು 80 ಅಡಿ ಎತ್ತರದ ಟವರ್ ಹತ್ತಿ ಕುಳಿತಿದ್ದಾಳೆ. ಹಾಗಿದ್ರೆ ಮುಂದೆನಾಯ್ತು? ಅನ್ನೋದು ನಿಮ್ಮ ಪ್ರಶ್ನೆಯಾಗಿದ್ರೆ ಈ ವೈರಲ್ ವಿಡಿಯೋವನ್ನ ನೋಡಲೇ ಬೇಕು.
ಪ್ರಿಯಕರನ ಮೇಲೆ ಕೋಪಿಸಿಕೊಂಡು ಯುವತಿಯೊಬ್ಬಳು 80 ಅಡಿ ಎತ್ತರದ ಹೈ ಟೆನ್ಶನ್ ವಿದ್ಯುತ್ ಟವರನ್ನು ಏರಿ ರಂಪಾಟ ನಡೆಸಿರುವ ಘಟನೆ ನಡೆದಿರುವುದು ಚತ್ತೀಸ್ ಗಢದ ಗೌರೆಲಾ ಪೇಂದ್ರ ಮರ್ವಾಹಿ ಜಿಲ್ಲೆಯಲ್ಲಿ. ಯುವತಿ ಟವರ್ ಹತ್ತಿ ಕುಳಿತಿದ್ದನ್ನು ಕಂಡು ಕಂಗಾಲಾದ ಯುವಕ ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಕಂಡು ತಾನು ಕೂಡಾ ಟವರ್ ಅನ್ನು ಏರಿದ್ದಾನೆ.
ಚಿಕ್ಕ ಮುನಿಸು ವಿಕೋಪಕ್ಕೆ ತಿರುಗಿ ಯುವಕ ಯುವತಿ ಇಬ್ಬರೂ ವಿದ್ಯುತ್ ಟವರ್ ಏರಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಪೇಂದ್ರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಸ್ಥಳಿಯರು ಹಾಗೂ ಪೊಲೀಸರು ಹರಸಾಹಸ ಪಟ್ಟು ಅಂತಿಮವಾಗಿ ಇವರಿಬ್ಬರನ್ನೂ ಟವರ್ ನಿಂದ ಕೆಳಗಿಳಿಸಿ ಬುದ್ಧಿಮಾತು ಹೇಳಿ ಮನೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದ್ದು, ಈ ವಿಡಿಯೋ ಮಾತ್ರ ಎಲ್ಲೆಡೆ ವೈರಲ್ ಆಗುತ್ತಿದೆ.