ಕೆಲ ದಿನಗಳಿಂದ ಅಮಾಯಕ ಬುಡಕಟ್ಟು ವ್ಯಕ್ತಿಯೊಬ್ಬನ ಮೇಲೆ ಮಧ್ಯಪ್ರದೇಶ ಬಿಜೆಪಿ ಶಾಸಕನ ಆಪ್ತ ಎನ್ನಲಾದ ಪ್ರವೇಶ್ ಶುಕ್ಲ ಎಂಬ ಯುವಕ ಮೂತ್ರ ವಿಸರ್ಜಿಸಿದ ಘಟನೆ ವಿಡಿಯೋ ಭಾರೀ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಆ ಯುವಕನ ಅಮಾನವೀಯ ನಡೆಗೆ ತೀವ್ರ ಆಕ್ರೋಶ ವ್ಯತ್ತವಾಗಿತ್ತು. ಜೊತೆಗೆ ಆತನ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಜನಾಗ್ರಹ ಕೇಳಿ ಬಂದಿತ್ತು. ಇದೀಗ ಸಂತ್ರಸ್ತ ವ್ಯಕ್ತಿಯನ್ನು ಭೇಟಿ ಮಾಡಿರುವ ಅಲ್ಲಿನ ಮುಖ್ಯಮಂತ್ರಿ ಆತನ ಕಾಲು ತೊಳೆದಯ ಕ್ಷಮೆ ಕೇಳಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ನೊಂದಿಗೆ ಜನಮನ್ನಣೆ ಗಳಿಸುತ್ತಿದೆ.
ಮಧ್ಯಪ್ರದೇಶದ ಬಿಜೆಪಿ ಶಾಸಕನ ಆಪ್ತ ಎನ್ನಲಾದ ಪ್ರವೇಶ್ ಶುಕ್ಲ ಎಂಬಾತ ರಸ್ತೆ ಬದಿಯಲ್ಲಿ ಅಮಾಯಕನೊಬ್ಬನ ಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ದೌರ್ಜನ್ಯಕ್ಕೆ ಒಳಗಾದ ದಶ್ಮತ್ ರಾವತ್ ನನ್ನು ಭೋಪಾಲ್ ನಲ್ಲಿರುವ ತಮ್ಮ ನಿವಾಸಕ್ಕೆ ಕರೆಸಿಕೊಂಡಿರುವ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಆತನ ಕಾಲು ತೊಳೆದು ಕ್ಷಮೆ ಕೇಳಿ, ಆತನಿಗೆ ಹೂವಿನ ಹಾರ ಹಾಕಿ ಗೌರವಿಸಿದ್ದಾರೆ.
ಇದರೊಂದಿಗೆ ಅಮಾಯಕನ ಮೇಲೆ ಮೂತ್ರ ವಿಸರ್ಜನೆ ಮಾಡಿ ದರ್ಪ ತೋರಿದ ಪ್ರವೇಶ್ ಶುಕ್ಲನನ್ನು ಮುಖ್ಯಮಂತ್ರಿ ಆದೇಶದ ಮೇರೆಗೆ ಪೊಲೀಸರು ಬಂದಿಸಿದ್ದಾರೆ. ಜೊತೆಗೆ ಆತನ ಅಕ್ರಮ ನಿರ್ಮಾಣದ ಕಟ್ಟಡಗಳ ಮೇಲೆ ಬುಲ್ಡೋಜರ್ ದಾಳಿ ನಡೆಸಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆಯ ಬಗ್ಗೆ ವ್ಯಾಪಕ ಜನಾಭಿಪ್ರಾಯ ಬಂದಿರುವ ಬೆನ್ನಲ್ಲೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಈ ಕ್ರಮ ಕೈಗೊಂಡಿದ್ದಾರೆ.
ತಮ್ಮ ರಾಜ್ಯದಲ್ಲಿ ನಡೆದ ವಿಕೃತ ದೌರ್ಜನ್ಯದ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್, ‘ಆರೋಪಿ ಪ್ರವೇಶ್ ಶುಕ್ಲ ಮಾನವೀಯತೆಗೆ ಕಳಂಕವಿದ್ದಂತೆ. ಆತ ಮಾಡಿದ ದೌರ್ಜನ್ಯಕ್ಕೆ ಕಠಿಣ ಶಿಕ್ಷೆಯೂ ಕಡಿಮೆ. ಆತನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಲಾಗುವುದು. ಇದು ಎಲ್ಲರಿಗೂ ಪಾಠವಾಗಬೇಕು.ಇನ್ನೆಂದೂ ಕೂಡ ಸಮಾಜದಲ್ಲಿರುವ ಅಮಾಯಕರ ಮೇಲೆ ಇಂತಹ ದೌರ್ಜನ್ಯ ನಡೆಯಬಾರದು’ ಎಂದಿದ್ದಾರೆ.



