ಬೆಂಗಳೂರಿನ ಧರ್ಮರಾಯ ದೇವಸ್ಥಾನದ ಕರಗ ಉತ್ಸವದಲ್ಲಿ ಬ್ರಹ್ಮಾಂಡ ಗುರೂಜಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ. ಮುಂದಿನ ತಿಂಗಳು ಇಪ್ಪತ್ತೊಂಬತ್ತಕ್ಕೆ ರಾಹು ಕೇತು ಬದಲಾಗುತ್ತಾರೆ. ನಾಲ್ಕು ಗ್ರಹಗಳು ಮೂರೇ ತಿಂಗಳಲ್ಲಿ ಬದಲಾಗುವುದರಿಂದ ಅನೇಕ ಬದಲಾವಣೆಯಾಗುತ್ತದೆ ಎಂದು ಅವರು ನಾಡಿನ ಜನತೆಗೆ ಎಚ್ಚರಿಕೆಗಳನ್ನು ನೀಡಿದ್ದಾರೆ.
ಪ್ರಧಾನಿ ಬಗ್ಗೆ ಹೇಳಿದ್ದೇನು?
ಇನ್ನೂ ಒಂದೂವರೆ ವರ್ಷದಲ್ಲಿ ಪ್ರಧಾನಿ ಮೋದಿ ರಾಜೀನಾಮೆ ಕೊಡುತ್ತಾರೆ. ವಿಶೇಷವಾಗಿ ಅಧಿಕಾರ ಬಿಟ್ಟು ಹೋಗುವಂತಹದ್ದು ಆಗುತ್ತದೆ. ಯಾಕೆಂದರೆ ವೈರಾಗ್ಯ ಬಂದ ಮೇಲೆ ಏನೂ ಮಾಡಲು ಆಗುವುದಿಲ್ಲ. ಹೀಗಾಗಿ ಮುಂದೆ ದೇಶವನ್ನು ಆಳುವುದು ಸನ್ಯಾಸಿ ಅಂತಾ ವಿಶೇಷವಾಗಿ ಹೇಳಬಹುದು ಎಂದರು. ಗೋ ರಕ್ಷಾಕೇಂದ್ರವನ್ನು ದೇಶದಲ್ಲಿ ಮೋದಿಯವರು ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಮುಂದಿನ ದಿನಗಳಲ್ಲಿ ಎಲ್ಲಾ ಧರ್ಮವನ್ನು ನಡೆಸುತ್ತಾರೆ ಎಂದು ಸುಳಿವು ನೀಡಿದ್ದಾರೆ.
ರೋಗ-ರುಜಿನಗಳು ಹೆಚ್ಚಾಗಲಿವೆ
ಈ ವರ್ಷ ದೇಶದಲ್ಲಿ ರೋಗ-ರುಜಿನಗಳು ಹೆಚ್ಚಾಗುತ್ತದೆ. ಜನ ಬಿಸಿಲಿನ ತಾಪದಿಂದ, ಚರ್ಮ ರೋಗದಿಂದ, ರೋಗ-ರುಜಿನಗಳಿಂದ ಬಳಲುತ್ತಾರೆ. ಎಲ್ಲರೂ ಮನೆಯಲ್ಲಿ ಅಡುಗೆ ಮಾಡುವುದನ್ನು ಬಿಟ್ಟು ಬಿಟ್ಟಿದ್ದೀರಾ. ಹೋಟೆಲ್ ಅಲ್ಲಿ ತಿನ್ನುವುದು ಜಾಸ್ತಿಯಾಗಿದೆ. ಯಾರು ಯಾವ ನೀರಿನಲ್ಲಿ ಮಾಡುತ್ತಾರೆ ಗೊತ್ತಿಲ್ಲ. ಹೀಗಾಗಿ ಮೀನಾ ರಾಶಿಯಲ್ಲಿರುವ ಶನೀಶ್ವರ ವ್ಯಾದಿಯನ್ನು ಕೊಡುವುದು ಸತ್ಯ ಎಂದು ಹೇಳಿದ್ದಾರೆ. ಹೀಗಾಗಿ ಈ ವರ್ಷ ಆರೋಗ್ಯದ ರಕ್ಷಣೆ ಮಾಡಿಕೊಳ್ಳಿ. ಊಟ ತಿಂಡಿ ಯಾವ ಜಾಗದಲ್ಲಿ ಮಾಡುತ್ತೀರಾ ಎನ್ನುವದನ್ನು ಎಚ್ಚರ ವಹಿಸಿ. ಮಕ್ಕಳನ್ನು ಮೈ ತುಂಬಾ ಕಣ್ಣು ಎನ್ನುವಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.
ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿಗಳ ಗುಟ್ಟು ಬಯಲಾಗುತ್ತೆ
ಯಾವ ರೀತಿ ಅಪಘಾತಗಳು ಸಂಭವಿಸುತ್ತದೆ ಎಂದು ಹೇಳಲು ಆಗುವುದಿಲ್ಲ. ಹೀಗಾಗಿ ಎಲ್ಲರೂ ನಿಧಾನವಾಗಿ ವಾಹನ ಚಲಾಯಿಸಿ. ಇನ್ನು ಮೇಲೆ ಮಿಥುನ ರಾಶಿಗೆ ಗುರು ಬರುವುದರಿಂದ ಯಾರ್ಯಾರು ಇಬ್ಬರು ಹೆಂಡತಿಯನ್ನು ಇಟ್ಟುಕೊಂಡಿದ್ದೀರಾ, ಮೂರು ಮೂರು ಕಟ್ಟಿಕೊಂಡಿದ್ದೀರಾ, ಯಾರು ಗೊತ್ತಿಲ್ಲದೇ ಸಂಬಂಧವನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದೀರಾ ಅವರೆಲ್ಲಾ, ದೊಡ್ಡ ಸಚಿವರಿಂದ ಹಿಡಿದು ಸಿನಿಮಾ ಸೆಲೆಬ್ರಿಟಿಗಳು ಬೀದಿಗೆ ಬರುವುದು ಗ್ಯಾರಂಟಿ. ವಕೀಲ ವರ್ಗಕ್ಕೆ, ಮಾಧ್ಯಮ ವರ್ಗಕ್ಕೆ ಕೆಲಸ ಹೆಚ್ಚಾಗುತ್ತದೆ. ಪೊಲೀಸರು ವಿಶೇಷವಾಗಿ ರಕ್ತಪಾತ ಆಗುವುದನ್ನು ನಿಲ್ಲಿಸಬೇಕು. ಎಲ್ಲರೂ ದೇವರಲ್ಲಿ ಒಳ್ಳೆಯದನ್ನೇ ಮಾಡಪ್ಪ ಅಂತಾ ಬೇಡಿಕೊಳ್ಳಬೇಕು ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ