ಸಿದ್ದರಾಮಯ್ಯ ಸಿಎಂ ಆದಾಗಿನಿಂದಲೂ ಅವರ ಸಮಯವೇ ಸರಿ ಇಲ್ಲ ಅನ್ನಿಸುತ್ತೆ. ಅವರು ಅಧಿಕಾರ ಸ್ವೀಕಾರ ಮಾಡಿದಾಗಿನಿಂದಲೂ ಕೂಡ ಒಂದಲ್ಲ ಒಂದು ಆರೋಪಗಳು, ವಿರೋಧಗಳು ಬರುತ್ತಲೇ ಇದ್ದಾವೆ. ಇದರ ಜೊತೆಗೆ ಸಂಪುಟದ ಸಚಿವರುಗಳ ಎಡವಟ್ಟನ್ನೂ ಸಿಎಂ ಅನುಭವಿಸುವಂತಾಗಿದೆ. ಮುಡಾ ವಿಚಾರದಲ್ಲಿ ಸದ್ಯ ಲೋಕಾಯುಕ್ತದಿಂದ ಕ್ಲೀನ್ ಚಿಟ್ ಸಿಕ್ಕಿದ್ದ ಬೆನ್ನಲ್ಲೇ ಒಂದಿಷ್ಟು ನಿರಾಳರಾಗಿದ್ದ ಸಿಎಂ ಇಡಿಯಿಂದ ಮತ್ತೆ ಸಂಕಷ್ಟ ಎದುರಾಗುವಂತೆ ಆಗಿತ್ತು. ಆದರೆ ಈಗ ಮತ್ತೊಂದು ಆರೋಪ ಸಿಎಂ ಮೇಲೆ ಬಂದಿದೆ.
ಮುಡಾದಿಂದ ಸಿಎಂ ಇನ್ನೂ ಮುಕ್ತ ಆಗಿಲ್ಲ. ಅದರ ಬೆನ್ನಲ್ಲೇ ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಗಣಿ ಗುತ್ತಿಗೆ ನೀಡುವ ವಿಚಾರದಲ್ಲಿ ಸಿಎಂ ಕಿಕ್ ಬ್ಯಾಕ್ ತೆಗೆದುಕೊಂಡಿದ್ದಾರೆ ಹೀಗಾಗಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಅಂತ ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯಪಾಲರಿಗೆ ದೂರು ಕೊಟ್ಟಿದ್ದಾರೆ.

ಹೌದು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದಲೂ ಅಂದರೆ ಸಿಎಂ ಆದಾಗಿನಿಂದಲೂ ಕೂಡ ಒಂದಲ್ಲ ಒಂದು ಆರೋಪ ಎದುರಿಸುತ್ತಲೇ ಇದ್ದಾರೆ. ಮುಡಾ ಪ್ರಕರಣದಿಂದ ಈಗಾಗಲೇ ಸಾಕಷ್ಟು ಮುಜುಗರ ಅನುಭವಿಸಿದ್ದ ಸಿಎಂ ಈಗಲೂ ಅದರಿಂದ ಮುಕ್ತ ಆಗಿಲ್ಲ. ಅದರ ಕೇಸ್ ಈಗಲೂ ನಡೆಯುತ್ತಿದೆ. ಆದರೆ ಈಗ ಮತ್ತೊಂದು ಗಂಭೀರ ಆರೋಪ ಸಿಎಂ ವಿರುದ್ಧ ಕೇಳಿ ಬಂದಿದೆ. ಕಾನೂನು ಬಾಹಿರವಾಗಿ ಗಣಿ ಗುತ್ತಿಗೆ ನೀಡಿದ್ದಾರೆ ಅಂತ ಆರೋಪಿಸಿ ದಾಖಲೆ ಸಮೇತ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ ರಾಜ್ಯಪಾಲರಿಗೆ ದೂರು ನೀಡಿದ್ದಾರೆ.
ಸಿಎಂ ವಿರುದ್ಧ ಈಗ ಕಿಕ್ ಬ್ಯಾಕ್ ಆರೋಪ ಕೇಳಿ ಬಂದಿದೆ. 2015ರಲ್ಲಿ 8 ಗಣಿ ಗುತ್ತಿಗೆ ನೀಡುವ ವಿಚಾರವಾಗಿ ಕಾನೂನುಗಳನ್ನ ಸಿಎಂ ಗಾಳಿಗೆ ತೂರಿದ್ದಾರೆ. ಹರಾಜು ಹಾಕುವ ಬದಲಿಗೆ ನವೀಕರಣ ಮಾಡಿದ್ದಾರೆ. ಗಣಿ ಹಗರಣದಲ್ಲಿ ತನಿಖೆ ಎದುರಿಸುತ್ತಿರುವ ಗಣಿ ಕಂಪೆನಿಗಳ ಲೈಸೆನ್ಸ್ ಕೂಡ ನವೀಕರಣಕ್ಕೆ ಸಿಎಂ ಸಹಿ ಹಾಕಿದ್ದಾರೆ. ಇದನ್ನ ನೋಡಿದರೆ ಸುಮಾರು 500 ಕೋಟಿ ಕಿಕ್ಬ್ಯಾಕ್ ಪಡೆದಿದ್ದಾರೆ ಎಂಬುದು ಗುಮಾನಿ. ಸಿಎಂ ಸಿದ್ದರಾಮಯ್ಯ ನಿರ್ಧಾರದಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 5000 ಕೋಟಿ ನಷ್ಟ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಸಂಬಂಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಎಂದು ರಾಮಮೂರ್ತಿ ಗೌಡ ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.

ಇನ್ನು ನವೀಕರಣಗೊಂಡ ಯಾವೆಲ್ಲಾ ಗಣಿ ಕಂಪನಿಗಳು ಅನ್ನೋದನ್ನ ನೋಡೋದಾದ್ರೆ. ತುಮಕೂರು ಮಿನರಲ್ಸ್ (ಸೊಂದೇನಹಳ್ಳಿ)
161.87 ಎಕರೆ, ವೆಸ್ಕೊ 46.55 ಎಕರೆ, ರಾಮ್ಗಡ (ಡಾಲ್ಮೀಯ) ಮಿನರಲ್ಸ್ 828.6 ಎಕರೆ, ಕರ್ನಾಟಕ ಲಿಂಪ್ಕೋ 40.47 ಎಕರೆ, ಕೆಎಂಎಂಎಂಐ(ಕಾರಿಗನೂರು ಮಿನರಲ್ಸ್ ) 498.57 ಎಕರೆ, ಎಂಇಎಲ್(ಬಿಬಿಎಚ್)
259.52 ಎಕರೆ, ಎಂ ಉಪೇಂದ್ರನ್ ಮೈನ್ಸ್
112.3 ಎಕರೆ, ಜಯರಾಮ್ ಮಿನರಲ್ಸ್
29.35 ಎಕರೆ ಗಣಿಗಳು ಲಿಸ್ಟ್ ನಲ್ಲಿ ಇವೆ.
ಇನ್ನು ಇನ್ನು ಕೊಟ್ಟಿರುವ ದೂರಿನಲ್ಲಿ ಮಾಡಿರುವ ಆರೋಪ ಅಂದರೆ, ಕಬ್ಬಿಣ ಅದಿರಿನ ಗಣಿಗಳನ್ನು ಹರಾಜಿನ ಮೂಲಕ ಹಂಚಿಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು ಆದರೂ ಕೇಂದ್ರದ ನಿಯಮಗಳನ್ನು ಮೀರಿ ರಾಜ್ಯ ಗಣಿ ಇಲಾಖೆ ಎಂಟು ಗಣಿ ಕಂಪೆನಿಗಳ ಗುತ್ತಿಗೆ ನವೀಕರಣ ಮಾಡಲಾಗಿದೆ. ಗುತ್ತಿಗೆ ನವೀಕರಣಗೊಂಡ ಕಂಪನಿಗಳ ಪೈಕಿ, ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಸಿಬಿಐ ತನಿಖೆ ಎದುರಿಸುತ್ತಿರುವ ಕಂಪೆನಿಗಳೂ ಸೇರಿವೆ. ಸರ್ಕಾರಕ್ಕೆ ರಾಜಧನ ಪಾವತಿಸದ ಕಂಪನಿಯೂ ಇದೆ. ಈ ಗಣಿಗಳನ್ನು ಹರಾಜು ಹಾಕಿದ್ದರೆ ಸರ್ಕಾರಕ್ಕೆ ಸಾವಿರಾರು ಕೋಟಿ ಸಂಗ್ರಹವಾಗುತ್ತಿತ್ತು ಆದರೆ ಅದನ್ನ ಸಿಎಂ ಮಾಡಿಲ್ಲ. 108 ಕಂಪೆನಿಗಳ ಪೈಕಿ ಎಂಟು ಕಂಪೆನಿಗಳಿಗೆ ಮಾತ್ರ ಗುತ್ತಿಗೆ ನವೀಕರಣ ಮಾಡಿರುವ ಕಾರಣವೇನು ಎಂಬುದೇ ಅನುಮಾನ ಎಂಬ ಹಲವು ಕಾರಣಗಳನ್ನ ದೂರಿನಲ್ಲಿ ಕೊಡಲಾಗಿದೆ.

ಇನ್ನು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿ ಎಂದು ದೂರು ನೀಡಿದ್ದಾರೆ. ಅಷ್ಟೆ ಅಲ್ಲ ಸಿಎಂ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ಸೆಕ್ಷನ್ 7, 9, 11, 12 ಮತ್ತು 15 ಅಡಿ ಪ್ರಾಸಿಕ್ಯೂಷನ್ ಅನುಮತಿ ನೀಡಿ ಜೊತೆಗೆ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 59, 61, 42, 201, 227, 228, 229, 239, 314, 316 (5) 318 (1), 319, 322, 324 (2), 324 (3), 335, 336, 338, 340 ರ ಪೂರ್ವಾನುಮತಿ ನೀಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ಈ ಸಂಬಂಧ ದೂರುದಾರರ ಜೊತೆ ಸುದೀರ್ಘವಾಗಿ ಚರ್ಚೆ ನಡೆಸಿದ್ದಾರಂತೆ ಗವರ್ನರ್. ಅಷ್ಟೆ ಅಲ್ಲ ದೂರಿನ ಮೇಲೆ ಸಹಿ ಮಾಡಿ ಕಾನೂನು ವಿಭಾಗದ ಅಭಿಪ್ರಾಯಕ್ಕೆ ಕಳಿಸಿದ್ದಾರೆ. ಸಾಲಿಸಿಟರ್ ಜನರಲ್ ಬಳಿ ಚರ್ಚೆ ನಡೆಸಿ ತೀರ್ಮಾನ ಮಾಡುವುದಾಗಿ ಥಾವರ್ ಚಂದ್ ಗೆಹ್ಲೋಟ್ ದೂರುದಾರನಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಸದ್ಯ ಈ ಪ್ರಕರಣ ಕೂಡ ಸಿಎಂ ಗೆ ಕಂಠಕವಾಗುತ್ತಾ ಅನ್ನೋದೇ ಕುತೂಹಲ.