ಈಗಾಗಲೇ ರಾಜ್ಯದಲ್ಲಿ ಏರಿಕೆ ಬಿಸಿ ಜೋರಾಗಿದ್ದು, ಬಸ್, ಮೆಟ್ರೋ ಟಿಕೆಟ್ ದರ ಏರಿಕೆ ಕಂಡಿತ್ತು. ಹಾಗೆಯೇ, ಪೆಟ್ರೋಲ್, ಡಿಸೆಲ್ ಮುದ್ರಾಂಕ ಶುಲ್ಕ ಕೂಡ ಏರಿಕೆಯಾಗಿತ್ತು. ಇದೀಗ ರಾಜ್ಯದ ಹೆಮ್ಮೆಯ ನಂದಿನಿ ಹಾಲಿನ ದರ ಏರಿಕೆಯಾಗುವುದು ಬಹುತೇಕ ಖಚಿತವಾಗಿದೆ. 2025ರ ಬಜೆಟ್ ಅಧಿವೇಶನದಲ್ಲಿ ಈ ಕುರಿತು ಮಂಡನೆಯಾದ ನಂತರ ಹೊಸ ನಂದಿನಿ ಹಾಲು ದರ ಜಾರಿಗೆ ಬರಲಿದೆ. ಹಾಲಿನ ಒಕ್ಕೂಟಗಳು ಪ್ರತಿ ಲೀಟರ್ ಹಾಲಿನ ಮೇಲೆ ಐದು ರೂಪಾಯಿ ಹೆಚ್ಚಳ ಮಾಡುವಂತೆ ಈಗಾಗಲೇ ಮನವಿ ಮಾಡುತ್ತಲೇ ಬಂದಿದ್ದವು. ಆದರೆ, ರಾಜ್ಯ ಸರ್ಕಾರ ಬೇಡಿಕೆ ಈಡಿರಿಕೆಗೆ ಮುಂದಾಗಿರಲಿಲ್ಲ. ಆದರೀಗ ಈಗ ಬೆಲೆ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ.
ಕರ್ನಾಟಕ ಹಾಲು ಒಕ್ಕೂಟವು ಪ್ರಸ್ತಾಪಿಸಿರುವಂಮತೆ ಹಾಲಿನ ಬೆಲೆ ಏರಿಕೆ ಕೋರಿಕೆಯಿಂದ ಪ್ರತಿ ಲೀಟರ್ಗೆ ಕನಿಷ್ಟ 5 ರೂಪಾಯಿ ಹೆಚ್ಚಳವಾಗಲಿದ್ದು, ಜನ ಸಾಮಾನ್ಯರ ಮೇಲೆ ಗಮನಾರ್ಹ ಪರಿಣಾಮ ಬೀರಲಿದೆ. ಕರ್ನಾಟಕದ ಪ್ರತಿ ಮನೆಗಳಲ್ಲಿ ಬಳಕೆಯಾಗುವ ನಂದಿನಿ ಹಾಲಿನ ಎಲ್ಲಾ ವಿಧಗಳ ಮೇಲೂ ಹೊಸ ನಿಯಮ ಅನ್ವಯವಾಗಲಿದೆ.

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರು ವಿಧಾನ ಪರಿಷತ್ತಿನಲ್ಲಿ ಹಾಲಿನ ಬೆಲೆ ಏರಿಕೆ ಅನಿವಾರ್ಯ ಎಂಬುದ್ದಾಗಿ ಚರ್ಚಿಸಿದ್ದರು. ಆದರೆ ನಿಖರ ಮೊತ್ತದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ ನಂತರ ನಿರ್ಧರಿತವಾಗಲಿದೆ ಎಂದು ತಿಳಿದು ಬಂದಿತ್ತು. ಈ ಕುರಿತು ಸಹಕಾರ ಸಚಿವ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ “ಹಾಲಿನ ದರ ಹೆಚ್ಚಳ ಅನಿವಾರ್ಯವಾಗಿದ್ದು, ಈ ಕುರಿತು ಪಶುಸಂಗೋಪನ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯರೊಂದಿಗೆ ಚರ್ಚೆ ನಡೆಸಿದ್ದಾರೆ. ಆದರೆ, ಇನ್ನೂ ದರ ನಿಗದಿಯಾಗಿಲ್ಲ. ಶೀಘ್ರದಲ್ಲಿ ಹೊಸ ದರ ಜಾರಿಗೆ ಬರಲಿರುವುದಂತು ಖಚಿತ. ಮೇವಿನ ದರ ಸೇರಿದಂತೆ ಪಶುಸಂಗೋಪನೆಗೆ ಖರ್ಚು ಹೆಚ್ಚಿದೆ. ಈ ಎಲ್ಲವನ್ನು ಗಮನದಲ್ಲಿರಿಸಿಕೊಂಡು ದರ ಏರಿಕೆಗೆ ಸರ್ಕಾರ ಮುಂದಾಗಲಿದೆ. ಹಾಗೆಯೇ, ಏರಿಕೆಗೊಂಡ ದರವನ್ನು ನೇರವಾಗಿ ರೈತರಿಗೆ ತಲುಪಿಸಲಾಗುವುದು” ಎಂದು ಹೇಳಿದ್ದಾರೆ.

ಸರ್ಕಾರ ಹಾಲು ಉತ್ಪಾದರಕರಿಗೆ 656.07 ಕೋಟಿ ರೂಪಾಯಿ ಸಬ್ಸಿಡಿ ಬಾಕಿ ಉಳಿಸಿಕೊಂಡಿದ್ದು, 9.04ಲಕ್ಷ ಫಲಾನುಭವಿಗಳ ಮೇಲೆ ಇದು ಪರಿಣಾಮ ಬೀರಿದೆ. ಬಾಕಿ ಮೊತ್ತವನ್ನು ಬಿಡುಗಡೆ ಮಾಡಲು ಹಣಕಾಸು ಇಲಾಖೆಯನ್ನು ಕೇಳಲಾಗಿದೆ. ಇದಕ್ಕೆ ಅನುಮೋದನೆ ಪಡೆದ ನಂತರ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದು ಸಚಿವ ವೆಂಕಟೇಶ್ ತಿಳಿಸಿದ್ದಾರೆ.
ನಂದಿನಿ ದರ ಏರಿಕೆಗೆ ಕಾರಣ:
ಹೆಚ್ಚುತ್ತಿರುವ ಉತ್ಪಾದನ ವೆಚ್ಚ, ಜಾನುವಾರುಗಳ ಮೇವು ಹಾಗೂ ಸಾಗಣೆ ವೆಚ್ಚಗಳು ಹೈನುಗಾರರನ್ನು ಬೆಲೆ ಏರಿಕೆಗೆ ಒತ್ತಾಯಿಸುವಂತೆ ಮಾಡಿದೆ. ಇನ್ನು ಪ್ರಮುಖ ಕಾರಣವೆಂದರೆ ಹಾಲು ಉತ್ಪಾದನೆ ಮತ್ತು ಖರೀದಿ ಬೆಲೆಗಳಲ್ಲಿನ ಏರಿಳಿತ ಹಾಲಿನ ದರ ಹೆಚ್ಚಿಸುವುದು ಅನಿವಾರ್ಯವನ್ನಾಗಿಸಿದೆ ಎನ್ನುತ್ತಿದೆ ಸರ್ಕಾರ.

ಗ್ರಾಹಕರಿಗೆ ಹೆಚ್ಚಲಿದೆ ಹೊರೆ:
ಕರ್ನಾಟಕದ ಬ್ರ್ಯಾಂಡ್ ಆಗಿರುವ ನಂದಿನಿ ಹಾಲಿಗೆ ರಾಜ್ಯದೆಲ್ಲೆಡೆ ಹೆಚ್ಚಿನ ಬೇಡಿಕೆಯಿದೆ. ದಿನ ಬೆಳಗಾದರೆ ನಂದಿನ ಹಾಲಿನ ಪ್ಯಾಕೆಟ್ ಹಿಡಿದು ಮನೆಗೆ ತೆರಳುವವರ ಸಂಖ್ಯೆಗೇನು ಕಡಿಮೆಯಿಲ್ಲ. ಕಾಫಿ, ಟೀ ಮಾಡಲು ಕರ್ನಾಟಕದಲ್ಲಿ ಬಳಕೆಯಲ್ಲಿರುವ ನಂದಿನಿ ಹಾಲಿನ ದರ ಪದೇಪದೆ ಏರಿಕೆಗೊಳ್ಳುತ್ತಿರುವುದರ ನೇರ ಪರಿಣಾಮ ಗ್ರಾಹಕರ ಮೇಲೆಯೇ ಬೀಳುತ್ತಿರುವುದು. ಇನ್ನು ಹಾಲಿನ ದರ ಹೆಚ್ಚಾದರೆ ಹೊಟೇಲ್, ಕಾಂಡಿಮೆಂಟ್ಸ್ ಗಳಲ್ಲಿಯೂ ಸಹ ಕಾಫಿ, ಟೀ, ಹಾಲಿನ ದರವನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಹೆಚ್ಚುವರಿ 50 ಎಂ.ಎಲ್ಗೆ ಬೀಳಲಿದೆಯಾ ಕತ್ತರಿ…?
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಂದಿನಿ ಹಾಲಿನ ದರ ಎರಡನೇ ಬಾರಿ ಏರಿಕೆಗೊಳ್ಳುತ್ತಿದೆ. ಕಳೆದ ವರ್ಷವಷ್ಟೇ ಪ್ರತಿ ಲೀಟರ್ಗೆ 50 ಎಂ.ಎಲ್. ಹೆಚ್ಚುವರಿಯಾಗಿ ನೀಡಿ, 2 ರೂಪಾಯಿಯನ್ನು ಕೆಎಂಎಫ್ ಏರಿಕೆ ಮಾಡಿತ್ತು. ಆದರೀಗ ಹೆಚ್ಚುವರಿಯಾಗಿ ನೀಡಿದ್ದ 50 ಎಂ.ಎಲ್. ಹಾಲನ್ನು ಕಡಿತಗೊಳಿಸಿ, ಪ್ರತಿ ಲೀಟರ್ಗೆ 2ರಿಂದ 3ರೂಪಾಯಿ ಹೆಚ್ಚಿಸುವ ಸಾಧ್ಯತೆಯಿದೆ.