ಕಳೆದ ತಿಂಗಳಿನಿಂದ ಮೆಟ್ರೋ ದರ ಏರಿಕೆ ಕಂಡಿದೆ. ಮೊದಲೆಲ್ಲಾ ಬಹಳ ಬೇಗ ಹಾಗೂ ಹೆಚ್ಚು ಕಿರಿಕಿರಿಯಿಲ್ಲದೆ ಕೆಲಸಕ್ಕೆ ತೆರಳಬಹುದು ಎನ್ನುವ ಉದ್ದೇಶದಿಂದ ಬಹುಪಾಲು ಬೆಂಗಳೂರಿಗರು ಮೆಟ್ರೋ ಮೊರೆ ಹೋಗುತ್ತಿದ್ದರು. ಮೆಟ್ರೋ ಪ್ರಯಾಣ ದರವೂ ಹೆಚ್ಚಿಲ್ಲದಿದ್ದ ಕಾರಣ ಎಲ್ಲರೂ ಇದರ ಮೇಲೆ ಅವಲಂಬಿತರಾಗಿದ್ದರು. ಆದರೆ ಯಾವಾಗ ಬಿಎಂಆರ್ಸಿಎಲ್ ಮೆಟ್ರೋ ದರವನ್ನು ಕೂಡ ಹೆಚ್ಚು ಮಾಡಿದೆಯೋ ಆಗಿನಿಂದ ಮೆಟ್ರೋ ಪ್ರಯಾಣಿಕರು ತಮ್ಮ ದಾರಿಯನ್ನು ಬದಲಾಯಿಸಿದ್ದಾರೆ.
ಹೌದು, ಮೆಟ್ರೋ ದರ ಏರಿಕೆ ಎಫೆಕ್ಟ್ನಿಂದ ಬೆಂಗಳೂರಿನಲ್ಲಿ ಸಂಚರಿಸುವ ಮಂದಿ ಮತ್ತೆ ತಮ್ಮ ವಾಹನಗಳನ್ನು ರಸ್ತೆಗಿಳಿಸಿದರೆ, ಇನ್ನು ಕೆಲವರು ಇನ್ನಿತರ ಸಾರ್ವಜನಿಕ ವಾಹನಗಳಾದ ಬಸ್, ಆಟೋಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ರಸ್ತೆಯಲ್ಲಿ ವಾಹನಗಳೇ ಸಾಲುಗಟ್ಟಿ ನಿಂತಿರುವುದು ಬೆಳಗಿನ ಹಾಗೂ ಸಂಜೆಯ ಸಮಯದಲ್ಲಿ ಸರ್ವೆ ಸಾಮಾನ್ಯವಾಗಿ ಕಂಡು ಬರುತ್ತಿದೆ.

IISc ಪ್ರೋ.ಆಶಿಶ್ ವರ್ಮಾ
ಮೆಟ್ರೋ ಪ್ರಯಾಣ ದರ ಹೆಚ್ಚಳವಾಗಿರುವುದರಿಂದಲೇ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಗಣನೀಯವಾಗಿ ಹೆಚ್ಚಾಗಿದೆ. ಜೊತೆಗೆ ವಾಯು ಮಾಲಿನ್ಯದ ಪ್ರಮಾಣವು ಅಧಿಕವಾಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಕುರಿತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ(IISc) ಪ್ರೋಫೆಸರ್ ಆಶಿಶ್ ವರ್ಮಾ ಅಧ್ಯಯನ ನಡೆಸಿದ್ದು, ರಸ್ತೆ ದಟ್ಟಣೆ ಹಾಗೂ ವಾಯು ಮಾಲಿನ್ಯಕ್ಕೆ ನೇರವಾಗಿ ಕಾರಣವಾಗಿರುವ ಅಂಶಗಳೆಡೆಗೆ ಬೆಳಕು ಚೆಲ್ಲಿದ್ದಾರೆ. ಇವರು ನಡೆಸಿದ ಅಧ್ಯಯನದ ಬಗೆಗಿನ ಮಾಹಿತಿ ಇಲ್ಲಿದೆ.
ಜನ ಜೀವನದ ಮೇಲೆ ನಕಾರಾತ್ಮಕ ಪ್ರಭಾವ:
ಹೊಸ ವರ್ಷದ ಕೊಡುಗೆಗಳಾಗಿ ಜನವರಿಯಲ್ಲಿ ಮೊದಲು ಬಸ್ ದರ ಏರಿಕೆ ಕಂಡಿತ್ತು. ಅದರ ನಂತರ ಫೆಬ್ರವರಿ 9ರಿಂದ ಮೆಟ್ರೋ ದರ ಏರಿಕೆಯಾಗಿತ್ತು. ಇದರ ಪರಿಣಾಮ ಪ್ರತಿನಿತ್ಯ ಮೆಟ್ರೋದಲ್ಲಿ ಸಂಚರಿಸುತ್ತಿದ್ದ 80ರಿಂದ 90 ಸಾವಿರ ಪ್ರಯಾಣಿಕರು “ನಮ್ಮ ಮೆಟ್ರೋ”ದಿಂದ ವಿಮುಖರಾಗಿ ಟೂ ವಿಲ್ಹರ್ ಹಾಗೂ ಕಾರಗಳನ್ನು ರಸ್ತೆಗಿಳಿಸುತ್ತಿದ್ದಾರೆ. ಈ ಮೂಲಕ ಜನರಿಗೆ ಸಹಕಾರಿಯಾಗ ಬೇಕಿದ್ದ ಬೆಳವಣಿಗೆ ನಕಾರಾತ್ಮಕವಾಗಿ ಪರಿಣಾಮ ಬೀರಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ವಾಯು ಮಾಲಿನ್ಯಕ್ಕೂ ತಟ್ಟಿತು ದರ ಏರಿಕೆ ಬಿಸಿ:
ಸಾಮಾನ್ಯವಾಗಿ ಟ್ರಾಫಿಕ್ ಸಮಸ್ಯೆ ತಲೆದೂರುವುದೆ ವಾಹನ ಹೆಚ್ಚಳದಿಂದ, ವಾಹನ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಇದು ನೇರವಾಗಿ ವಾಯು ಮಾಲಿನ್ಯದ ಮೇಲೆ ಪರಿಣಾಮ ಬೀರುತ್ತದೆ. ನಗರದಲ್ಲಿ ಹೆಚ್ಚು ವಾಹನಗಳು ರಸ್ತೆಗಿಳಿಯುತ್ತಿರುವುದರಿಂದ ವಾಹನ ಉಗುಳುವ ಹೊಗೆ ಪರಿಸರದಲ್ಲಿ ಮಾಲಿನ್ಯ ಎಬ್ಬಿಸುತ್ತಿದೆ. ಅಂಕಿ-ಅಂಶದ ಪ್ರಕಾರ 5% ಮಂದಿ ಮೆಟ್ರೋ ಸಹವಾಸ ಬಿಟ್ಟಿದ್ದು, ತಮ್ಮ ಸ್ವಂತ ವಾಹನಗಳ ಬಳಕೆಗೆ ಮರಳಿದ್ದಾರೆ. ಇದರಿಂದಲೇ ರಸ್ತೆಯಲ್ಲಿ ವಾಹನಗಳು ಅಧಿಕವಾಗಿ ಕಾಣುತ್ತಿದ್ದು, ವಾಯು ಮಾಲಿನ್ಯಗೊಳ್ಳುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.

ಕರ್ನಾಟಕ ವಾಯುಮಾಲಿನ್ಯ ಮಂಡಳಿಯಿಂದಲೂ ಎಚ್ಚರಿಕೆ:
ಕರ್ನಾಟಕ ವಾಯುಮಾಲಿನ್ಯ ಮಂಡಳಿಯ ಏರ್ ಕ್ವಾಲಿಟಿ ಮಾನಿಟರಿಂಗ್ ಸೆಂಟರ್ ಕೂಡ ಬೆಂಗಳೂರಿನಲ್ಲಿ ಮಾಲಿನ್ಯ ಮಟ್ಟ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಏರ್ ಕ್ವಾಲಿಟಿ ಅಧ್ಯಯನದ ಪ್ರಕಾರ, ಮೆಟ್ರೋ ಟಿಕೆಟ್ ಶುಲ್ಕ ಹೆಚ್ಚಳಕ್ಕೆ ಮುಂಚೆ ನಗರದಲ್ಲಿ ಬೆಳಿಗ್ಗೆ ಹಾಗೂ ಸಂಜೆ ಸಂಚಾರ ದಟ್ಟಣೆಯಿರುವ ಸಮಯದಲ್ಲಿ ಪ್ರತಿಘನ ಮೀಟರ್ಗೆ ಮಾಲಿನ್ಯದ ಪ್ರಮಾಣ 43ರಿಂದ 54 ಮೈಕ್ರೋಗ್ರಾಮ್ ಇತ್ತು. ಆದರೆ ಫೆಬ್ರವರಿ 10ರಂದು ದಾಖಲೆಯಾದ ಮಾಲಿನ್ಯದ ಪ್ರಮಾಣ 112-114 ಮೈಕ್ರೋಗ್ರಾಂಗೆ ಏರಿಕೆಯಾಗಿದೆ. ಹೀಗೆ ವಾಯು ಮಾಲಿನ್ಯ ಹೆಚ್ಚಾಗುತ್ತಲೆ ಇದ್ದರೆ ಅಸ್ತಮಾ, ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆಯಿದೆ.
ಒಟ್ಟಾರೆ, ಸಾರ್ವಜನಿಕ ವಾಹನಗಳನ್ನು ಹೆಚ್ಚು ಬಳಸಿ ಎಂದು ಕರೆ ನೀಡುವ ಸರ್ಕಾರವೇ ಏಕಾಏಕಿ ಪ್ರಯಾಣ ದರವನ್ನು ಹೆಚ್ಚಿಸಿದರೆ ಸಾರ್ವಜನಿಕರು ತಮ್ಮ ಸ್ವಂತ ವಾಹನಗಳ ಮೊರೆ ಹೋಗುವುದು ಸಾಮಾನ್ಯವೇ ಅಲ್ಲವೇ. ಸರ್ಕಾರ ಈ ನಿಟ್ಟಿನಲ್ಲಿ ಚಿಂತಿಸಿ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲಿಲ್ಲವೆಂದರೆ ಗಾರ್ಡನ್ ಸಿಟಿ ಮತ್ತಷ್ಟು ನಲುಗಬಹುದಾದ ಸಾಧ್ಯತೆಯಿದೆ.