ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿ ಭಾನುವಾರದಿಂದ ಶನಿವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ 730ರ ಎಪಿಸೋಡ್ ಕಥೆ ಇಲ್ಲಿದೆ. ಲಕ್ಷ್ಮೀ ತನ್ನ ಅಕ್ಕ ಭಾಗ್ಯಾಳನ್ನು ಭೇಟಿ ಆಗಿ ಅವಳಿಗೆ ಧೈರ್ಯ ಹೇಳುತ್ತಾಳೆ. ಇನ್ಮುಂದೆ ನಾವು ಸಮಸ್ಯೆಗಳನ್ನು ಎದುರಿಸುವುದನ್ನು ಕಲಿಯೋಣ, ಯಾವುದೇ ಕಾರಣಕ್ಕೂ ಅಳಬಾರದು ಎಂದು ಅಕ್ಕ ತಂಗಿ ಇಬ್ಬರೂ ಪ್ರಮಾಣ ಮಾಡುತ್ತಾರೆ. ಲಕ್ಷ್ಮೀ ಜೀವನದಲ್ಲಿ ಸಮಸ್ಯೆ ಉಂಟಾಗಿರುವುದಕ್ಕೆ ಕೂಡಾ ಭಾಗ್ಯಾ ಬೇಸರ ವ್ಯಕ್ತಪಡಿಸುತ್ತಾಳೆ. ತಾನು ಬಂದು ವೈಷ್ಣವ್ ಜೊತೆ ಮಾತನಾಡುವುದಾಗಿ ಹೇಳುತ್ತಾಳೆ. ನೀನು ಮಾಡಬೇಕಿರುವುದು ಬಹಳ ಇದೆ. ನೀನು ಎಂದಿಗೂ ಸೋಲು ಒಪ್ಪಿಕೊಳ್ಳಬೇಡ, ಮೊದಲು ನಿನ್ನ ಸಂಸಾರದ ಕಡೆ ಗಮನ ಕೊಡು ಎಂದು ಅಕ್ಕನಿಗೆ ಧೈರ್ಯ ತುಂಬುತ್ತಾಳೆ.
ಮನೆ ಇಎಂಐ ಕಟ್ಟಿಲ್ಲವೆಂದು ಬ್ಯಾಂಕ್ನವರು ತಾಂಡವ್ಗೆ ಕರೆ ಮಾಡಿದಾಗ ಆತ ಬ್ಯಾಂಕ್ನವರ ಜೊತೆ ದುರಹಂಕಾರದಲ್ಲಿ ಮಾತನಾಡುತ್ತಾನೆ. ಮನೆ ಇಎಂಐ ಕಟ್ಟುವುದಿಲ್ಲ, ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಎನ್ನುತ್ತಾನೆ. ಭಾಗ್ಯಾಗೆ ಕಷ್ಟವಾಗಲಿ ಎಂಬ ಕಾರಣಕ್ಕೆ ತಾಂಡವ್ ಇಎಂಐ ಕಟ್ಟುವುದನ್ನು ನಿಲ್ಲಿಸಿರುತ್ತಾನೆ. ಬ್ಯಾಂಕ್ನವರು ಮನೆಗೆ ಹೋಗಿ ಸೀಜ್ ಮಾಡುವುದಾಗಿ ಹೇಳುತ್ತಾರೆ. ಅಷ್ಟರಲ್ಲಿ ಭಾಗ್ಯಾ, ಕೆಲಸದಿಂದ ಮನೆಗೆ ಬರುತ್ತಾಳೆ. ಬ್ಯಾಂಕ್ನವರಿಗೆ ಮನವಿ ಮಾಡಿ, ನಾಳೆವರೆಗೂ ಸಮಯ ಕೊಡಿ ಹೇಗಾದರೂ ಮಾಡಿ ಇಎಂಐ ಕಟ್ಟುತ್ತೇನೆ ಎನ್ನುತ್ತಾಳೆ. ಭಾಗ್ಯಾ ಮನವಿಗೆ ಸ್ಪಂದಿಸಿದ ಬ್ಯಾಂಕ್ನವರು ಒಂದು ದಿನ ಸಮಯ ಕೊಡುತ್ತಾರೆ.
ಮನೆ ಉಳಿಸಿಕೊಳ್ಳುವುದು ಹೇಗೆ ಎಂದು ಎಲ್ಲರೂ ಯೋಚಿಸುತ್ತಾ ಕೂರುತ್ತಾರೆ. ನಾವು ಖಂಡಿತ ಬೀದಿಗೆ ಬೀಳುತ್ತೇವೆ. ಆ ತಾಂಡವ್ ಬೇಕಂತಲೇ ಹೀಗೆಲ್ಲಾ ಮಾಡುತ್ತಿದ್ದಾನೆ ಎಂದು ಸುನಂದಾ ಗೋಳಾಡುತ್ತಾಳೆ. ನೀವು ಧೈರ್ಯ ಕಳೆದುಕೊಳ್ಳಬೇಡಿ. ಇವರು ಪಿಎಫ್ ಹಣ ತರಲು ಆಫೀಸಿಗೆ ಹೋಗಿದ್ದಾರೆ. ಖಂಡಿತ ಅದನ್ನು ತರುತ್ತಾರೆ. ಅದರಿಂದ ಮನೆ ಇಎಂಐ ಕಟ್ಟಿದರಾಯ್ತು ಎನ್ನುತ್ತಾಳೆ. ಅಷ್ಟರಲ್ಲಿ ಧರ್ಮರಾಜ್ ಬಹಳ ಸುಸ್ತಾಗಿ ಮನೆಗೆ ಬರುತ್ತಾನೆ. ಆತನನ್ನು ನೋಡಿ ಎಲ್ಲರೂ ಗಾಬರಿಯಾಗುತ್ತಾರೆ. ಏನಾಯ್ತು ಎಂದು ಕೇಳಿದಾಗ ಪಿಎಫ್ ಹಣ ತರುವಾಗ ಕಳ್ಳ, ಅದನ್ನು ಕಸಿದುಕೊಂಡು ಹೋದ ವಿಚಾರವನ್ನು ಹೇಳುತ್ತಾನೆ. ಅದನ್ನು ಕೇಳಿ ಕುಸುಮಾ ಗಾಬರಿಯಾಗುತ್ತಾಳೆ. ಆದರೆ ಭಾಗ್ಯಾ, ಮಾವನಿಗೆ ಧೈರ್ಯ ಹೇಳುತ್ತಾಳೆ. ನೀವು ಈ ರೀತಿ ಗಾಬರಿ ಆಗಬೇಡಿ, ಪೊಲೀಸ್ ಕಂಪ್ಲೇಂಟ್ ಕೊಡೋಣ ಎನ್ನುತ್ತಾಳೆ.
ತಮ್ಮ ಬಾಸ್ ಬಳಿ ಹಣ ಕೇಳೋಣ ಎಂದುಕೊಂಡು ಭಾಗ್ಯಾ, ತಾನು ಕೆಲಸ ಮಾಡುತ್ತಿರುವ ರೆಸಾರ್ಟ್ ಓನರ್ ಮನೆಗೆ ಹೋಗುತ್ತಾಳೆ. ರಾತ್ರಿ ವೇಳೆ ಭಾಗ್ಯಾ ಮನೆಗೆ ಬಂದಿರುವುದನ್ನು ನೋಡಿ ಆತ ಆಶ್ಚರ್ಯಗೊಳ್ಳುತ್ತಾನೆ. ಒಳಗೆ ಕರೆದು ಕೂರಿಸಿ ಏನು ವಿಚಾರ ಎಂದು ಕೇಳುತ್ತಾನೆ. ಭಾಗ್ಯಾ ತನ್ನ ಸಮಸ್ಯೆಗಳನ್ನೆಲ್ಲಾ ಹೇಳಿಕೊಂಡು ದಯವಿಟ್ಟು ಹಣದ ಸಹಾಯ ಮಾಡಿ, ಸಾಲ ಎಂದು ಕೊಡಿ, ತಪ್ಪದೆ ಬಡ್ಡಿ ತೀರಿಸುತ್ತೇನೆ ಎಂದು ಮನವಿ ಮಾಡುತ್ತಾಳೆ. ಆದರೆ ಆತ ಹಣ ನೀಡುವುದಿಲ್ಲ. ನಾನು ಎಲ್ಲರಿಗೂ ಇದೇ ರೀತಿ ಹಣ ಕೊಟ್ಟೂ ಕೊಟ್ಟೂ ಕಳೆದುಕೊಂಡಿದ್ದೇನೆ. ನನ್ನ ಬಳಿ ಹಣ ಕೇಳಬೇಡ, ದಯವಿಟ್ಟು ಇಲ್ಲಿಂದ ಹೋಗು ಎನ್ನುತ್ತಾನೆ. ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಭಾಗ್ಯಾ, ಮನೆಗೆ ವಾಪಸ್ ಬರುತ್ತಾಳೆ. ಧರ್ಮರಾಜ್ ಕೂಡಾ ಸ್ನೇಹಿತರ ಬಳಿ ಹಣ ಸಹಾಯ ಕೇಳುತ್ತಾನೆ. ಆದರೆ ಯಾರೂ ಆತನಿಗೆ ಸಹಾಯ ಮಾಡುವುದಿಲ್ಲ.
ಯಾರೂ ಹೆದರಬೇಡಿ, ಏನಾದರೂ ಒಂದು ವ್ಯವಸ್ಥೆ ಮಾಡೋಣ ಎಂದು ಭಾಗ್ಯಾ, ಎಲ್ಲರಿಗೂ ಧೈರ್ಯ ಹೇಳುತ್ತಾಳೆ. ಎಲ್ಲರಿಗೂ ಊಟ ಬಡಿಸುತ್ತಾಳೆ. ಮನೆಯಲ್ಲಿದ್ದ ಒಡವೆಗಳನ್ನು ನೋಡಿದ ಭಾಗ್ಯಾ, ಇಎಂಐ ಕಟ್ಟಲು ಈ ಒಡವೆ ಕೂಡಾ ಸಾಲುವುದಿಲ್ಲ, ಗುಂಡಣ್ಣನ ಸ್ಕೂಲ್ ಫೀಸ್ ಕಟ್ಟಬೇಕು, ಮನೆ ಖರ್ಚು ನಿಭಾಯಿಸಬೇಕು ಏನು ಮಾಡುವುದು ಎಂದು ಯೋಚಿಸುತ್ತಾ ಕೂರುತ್ತಾಳೆ. ನೀನೊಬ್ಬಳೇ ಎಲ್ಲಾ ಸಮಸ್ಯೆಯನ್ನು ಎದುರಿಸಲು ನಾವು ಬಿಡುವುದಿಲ್ಲ. ಎಲ್ಲರೂ ಒಟ್ಟಾಗಿ ನಮಗೆ ಬಂದ ಸಮಸ್ಯೆ ವಿರುದ್ಧ ಹೋರಾಡೋಣ. ಅದರಲ್ಲೂ ನನ್ನ ಮಗನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎನ್ನುವ ಕುಸುಮಾ ತಾನು ಧರಿಸಿದ್ದ ಒಡವೆಯನ್ನು ಭಾಗ್ಯಾಗೆ ಕೊಡುತ್ತಾಳೆ. ಸುನಂದಾ ಕೂಡಾ ಚಿನ್ನದ ಸರ ಕೊಡುತ್ತಾಳೆ.
ಇತ್ತ ಶ್ರೇಷ್ಠಾ, ತನ್ನ ಆಪ್ತ ಸ್ನೇಹಿತ ಶೌರ್ಯನಿಗೆ ಡಿನ್ನರ್ಗೆ ಆಹ್ವಾನಿಸುತ್ತಾಳೆ. ಇದನ್ನೆಲ್ಲಾ ನೀನೇ ಮಾಡಿದ್ದಾ ಎಂದು ಶೌರ್ಯ ಕೇಳುತ್ತಾನೆ. ನಾನೇ ಹೋಟೆಲ್ನಿಂದ ಆರ್ಡರ್ ಮಾಡಿದ್ದು, ಇನ್ನೂ ಸ್ವಲ್ಪ ಜನರಿಗೆ ಊಟ ಕೊಡಿಸುವಷ್ಟು ನಾನು ಖುಷಿಯಾಗಿದ್ದೇನೆ ಎಂದು ತಾಂಡವ್ ಹೇಳುತ್ತಾನೆ. ಮದುವೆ ಆದ ಖುಷಿಗಾ ಎಂದು ಶೌರ್ಯ ಕೇಳುತ್ತಾನೆ. ಅಲ್ಲ, ಆ ಭಾಗ್ಯಾಗೆ ಸರಿಯಾಗಿ ಬುದ್ಧಿ ಕಲಿಸಿದ ಖುಷಿಗೆ ಈ ಡಿನ್ನರ್, ಏನೋ ದೊಡ್ಡದಾಗಿ ತಾಳಿ ತೆಗೆದುಕೊಟ್ಟಳು, ಮನೆ ಇಎಂಐ ಕಟ್ಟಿಲ್ಲ, ಈಗ ಮನೆ ಹರಾಜಿಗೆ ಬಂದಿದೆ. ಮನೆಯನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ನೋಡುತ್ತೇನೆ ಎಂದು ತಾಂಡವ್ ಹೇಳುತ್ತಾನೆ. ಅದನ್ನು ಕೇಳಿ ಶೌರ್ಯ ಬೇಸರಗೊಳ್ಳುತ್ತಾನೆ. ಆದರೆ ಅದನ್ನು ತೋರಿಸಿಕೊಡದೆ, ಭಾಗ್ಯಾ ಬಹಳ ಸ್ಟ್ರಾಂಗ್ ಹೆಣ್ಣು ನನಗೆ ಅನ್ನಿಸುವ ಪ್ರಕಾರ ಅವರು ಈ ಸಮಸ್ಯೆಯಿಂದ ಖಂಡಿತ ಹೊರ ಬರುತ್ತಾರೆ. ಗಂಡನೇ ದೇವರು ಎಂದು ತಾಳಿಯನ್ನು ಪೂಜಿಸುತ್ತಿದ್ದ ಒಬ್ಬ ಹೆಣ್ಣು ಮಗಳು, ಈಗ ತಾಳಿಯನ್ನು ತೆಗೆದುಕೊಟ್ಟಿದ್ದಾಳೆ ಎಂದರೆ ಅವರು ಬಹಳ ಸ್ಟ್ರಾಂಗ್ ಆಗಿದ್ದಾರೆ ಎಂದು ಅರ್ಥ ಎಂದು ಶೌರ್ಯ ಹೇಳುತ್ತಾನೆ.
ಶೌರ್ಯ ಹೇಳಿದಂತೆ ಭಾಗ್ಯಾ, ಇಎಂಐ ಹಣ ಕಟ್ಟಿ ಮನೆಯನ್ನು ಉಳಿಸಿಕೊಳ್ಳುತ್ತಾಳಾ? ಭಾನುವಾರದ ಎಪಿಸೋಡ್ನಲ್ಲಿ ತಿಳಿಯಲಿದೆ.